ಮಂಗಳೂರಿನಲ್ಲಿ ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶಿಸಿದ ನಾಲ್ವರು ಯುವಕರ ಬಂಧನ
ಮಂಗಳೂರು, ನವೆಂಬರ್ 4: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಇತಿಹಾಸ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಐತಿಹಾಸಿಕ ದೇಗುಲದೊಳಗೆ ಪಾದರಕ್ಷೆ ಧರಿಸಿಕೊಂಡು ಪ್ರವೇಶಿಸಿದ ಅನ್ಯಧರ್ಮದ ಯುವಕರ ತಂಡ ದರ್ಪ ತೋರಿದೆ. ಈ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ ನಂತರದಲ್ಲಿ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ಯ ಧರ್ಮದ ಯುವಕರ ಗುಂಪೊಂದು ದೇವಸ್ಥಾನದ ಪಾವಿತ್ರತ್ಯೆಗೆ ಧಕ್ಕೆ ಉಂಟು ಮಾಡುವಂತಾ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದೊಳಗೆ ಪಾದರಕ್ಷೆ ಹಾಕಿಕೊಂಡು ಪ್ರವೇಶಿಸಿದ್ದ ಕಿಡಿಗೇಡಿಗಳು, ಈ ವಿಕೃತಿಯ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಕಿಡಿಗೇಡಿಗಳ ಕೃತ್ಯ ಸ್ಥಳೀಯ ಹಾಗೂ ದೇವಸ್ಥಾನದ ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ದೇಗುಲದ ವ್ಯವಸ್ಥಾಪನಾ ಸಮಿತಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್.ಐ.ಆರ್ ದಾಖಲಿಸಿಕೊಳ್ಳಲಾಗಿತ್ತು.
ಮಂಗಳೂರು; ಹಂದಿ ಫಾರ್ಮ್ ತೆರವಿಗೆ ದೇವಾಲಯದ ಭಕ್ತರ ಒತ್ತಾಯ
ಕಾರಿಂಜೇಶ್ವರ ದೇವಸ್ಥಾನದ ಬಳಿಗೆ ಕಾರಿನಲ್ಲಿ ಆಗಮಿಸಿದ ಆರು ಮಂದಿ ಅನ್ಯ ಧರ್ಮೀಯ ಯುವಕರ ತಂಡವು ಚಪ್ಪಲಿಗಳನ್ನು ಹಾಕಿಕೊಂಡೇ ದೇವಸ್ಥಾನದ ಅಂಗಳಕ್ಕೆ ಪ್ರವೇಶಿಸಿದೆ. ಪಾದರಕ್ಷೆಗಳನ್ನು ಹಾಕಿಕೊಂಡೇ ದೇವಸ್ಥಾನ ಮತ್ತು ಸುತ್ತಲಿನ ಪರಿಸರದಲ್ಲಿ ಸುತ್ತಾಡಿದ್ದರು. ದೇವಸ್ಥಾನ ಎಂಬುದು ಪೂಜ್ಯನೀಯ ಸ್ಥಳ ಎಂದು ಗೊತ್ತಿದ್ದರೂ ಚಪ್ಪಲಿ ಧರಿಸಿಕೊಂಡು ಪ್ರವೇಶಿಸಿ ಅಪವಿತ್ರಗೊಳಿಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು:
ಚಪ್ಪಲಿ ಧರಿಸಿಕೊಂಡು ಕಾರಿಂಜೇಶ್ವರ ದೇವಸ್ಥಾನ ಪ್ರವೇಶಿಸಿದ ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕಾರ್ಯ ಪ್ರವೃತ್ತರಾದ ಪುಂಜಾಲಕಟ್ಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಇನ್ನು ಬಂಧಿತ ಆರೋಪಿಗಳು ಮಂಗಳೂರಿನ ಮಾಸ್ತಿಕಟ್ಟೆ, ಉಳ್ಳಾಲದ ಹಳೆಕೋಟೆ, ಉಳ್ಳಾಲದ ಮುಕ್ಕಚ್ಚೇರಿ, ಮಂಗಳೂರಿನ ಪೆರ್ಮನ್ನೂರು ಬಬ್ಬುಕಟ್ಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳು ಕೇರಳ ಮೂಲದವರು ಎಂದು ಗೊತ್ತಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ಸ್ಟಗ್ರಾಂ ಖಾತೆ ವಿವರಗಳಿಂದ ಸಿಕ್ಕಿಬಿದ್ದ ಆರೋಪಿಗಳು:
ಕಾರಿಂಜೇಶ್ವರ ದೇವಸ್ಥಾನ ಅಪವಿತ್ರಗೊಳಿಸಿದ ಆರೋಪ ಎದುರಿಸುತ್ತಿದ್ದ ಆರೋಪಿಗಳನ್ನು ಅವರ ಕಾರಿನ ನೋಂದಣಿ ಸಂಖ್ಯೆ ಮತ್ತು ಇನ್ಸ್ಟಗ್ರಾಂ ಖಾತೆ ವಿವರಗಳ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಕೇರಳ ಹಾಗೂ ಉಳ್ಳಾಲ ಮೂಲದ ನಾಲ್ವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಧಾರ್ಮಿಕ ಕ್ಷೇತ್ರ ರೀತಿ ರುವಾಜು ಗೊತ್ತಿದ್ದರೂ, ದೇವಸ್ಥಾನವನ್ನು ಅಪವಿತ್ರ ಮಾಡಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ಅಡ್ಡಿಪಡಿಸುವವರು ಯಾರೇ ಆಗಿದ್ದರು ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂಬ ಕೂಗು ಕೇಳಿ ಬಂದಿದೆ.