ಚುನಾವಣೆ, ಪದವಿಯಲ್ಲಿ ಆಸಕ್ತಿಯಿಲ್ಲ: ಕುಕ್ಕೆಯಲ್ಲಿ ರಾಜಕೀಯ ಸನ್ಯಾಸತ್ವದ ಬಗ್ಗೆ ಮಾತನಾಡಿದ ಸದಾನಂದಗೌಡ
ಮಂಗಳೂರು, ನವೆಂಬರ್ 04: ಬಿಜೆಪಿ ನಾಯಕರ ಬಗ್ಗೆಯೇ ಪರೋಕ್ಷವಾಗಿ ಹೇಳಿಕೆಗಳನ್ನು ನೀಡುತ್ತಿದ್ದ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಈಗ ರಾಜಕೀಯ ನಿವೃತ್ತಿಯ ಬಗ್ಗೆ ಮಾತುಗಳನ್ನಾಡಿದ್ದಾರೆ. ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸದಾನಂದ ಗೌಡ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದರ್ಶನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸ್ಪರ್ಧೆಯಲ್ಲಿ, ಪದವಿಯಲ್ಲಿ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಯಾರು ನಿಂತರೂ ಬಿಜೆಪಿಗೆ ಸೋಲಾಗಲ್ಲ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯಕ್ಕೆ ಇದು ಅನ್ವಯವಾಗಲಿದೆ ಎಂದರು.

ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಸುಳ್ಯದಂತಹ ಕುಗ್ರಾಮದಲ್ಲಿದ್ದ ನನ್ನನ್ನು ಪಕ್ಷ ಶಾಸಕ, ಸಂಸದ, ಕೇಂದ್ರ ಸಚಿವ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಬಿ.ಎಸ್.ಯಡಿಯೂರಪ್ಪರ ಬಳಿಕ ಪಕ್ಷದಲ್ಲಿ ಇಷ್ಟೊಂದು ಸ್ಥಾನಗಳನ್ನು ಪಡೆದ ವ್ಯಕ್ತಿ ನಾನೊಬ್ಬನೇ. ಇನ್ನು ಏನಿದ್ದರೂ ಪಕ್ಷವನ್ನು ಗೆಲ್ಲಿಸುವುದರಲ್ಲಿ ನನಗೆ ಆಸಕ್ತಿ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡುವುದರಲ್ಲಿ ಆಸಕ್ತಿ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ದ ಬಗ್ಗೆಯೂ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಸ್ಥಿತಿ ಮನೆಯೊಂದು ನೂರು ಬಾಗಿಲು ಎಂಬಂತಾಗಿದೆ .ಕರ್ನಾಟಕ ರಾಜಕಾರಣದ ಇತಿಹಾಸದಲ್ಲೇ ಇಂತಹ ಕಚ್ಚಾಟ ಎಂದೂ ನೋಡಿಲ್ಲ. ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಹಲವು ಗುಂಪುಗಳು ಅಸ್ತಿತ್ವಕ್ಕೆ ಬಂದಿವೆ ಎಂದರು.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಅಸಮಾಧಾನದ ಗುಂಪುಗಳಾಗುತ್ತಿವೆ. ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ರಾಜಣ್ಣ, ಬಸವರಾಜ್ ಹೀಗೆ ಶಾಸಕರಿಗೊಬ್ಬರಂತೆ ಒಂದು ಗುಂಪು ಹುಟ್ಡಿಕೊಂಡಿದೆ. ಈ ಬೆಳವಣಿಗೆಯನ್ನು ಕಂಡ ರಾಜ್ಯದ ಜನತೆಗೆ ಈ ಸತಲಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಗೊತ್ತಾಗಿದೆ. ಇದು ರಾಜ್ಯ ರಾಜಕಾರಣದ ಶೋಚನೀಯ ಸ್ಥಿತಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕ್ಲೇನ್ ಸ್ವೀಪ್ ಮಾಡಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಲ್ಲಿ ಕೆಲವು ಗೊಂದಲಗಳಿತ್ತು. ಕಾಂಗ್ರೆಸ್‌ನಲ್ಲಿ ಉತ್ತಮ ನಾಯಕರು ಇದ್ದ ಕಾರಣ ಅವರಿಗೆ ಅಧಿಕಾರ ದೊರೆತಿದೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಗೆ ನಾಯಕರೇ ಇಲ್ಲ ಎನ್ನುವ ಸ್ಥಿತಿಯಿದೆ. ರಾಹುಲ್ ಗಾಂಧಿ ಮಕ್ಕಳಾಟಿಕೆಯಿಂದ ಇಂದು ಹೊರ ಬಂದಿಲ್ಲ. ಅವರೊಬ್ಬ ಮಕ್ಕಳಾಟಿಕೆಯ ನೇತಾರ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣದಲ್ಲಿ ತೊಡಗಿದೆ. ಅಲ್ಪಸಂಖ್ಯಾತರೇ ಅವರಿಗೆ ಗತಿ ಎನ್ನುವ ಹಂತಕ್ಕೆ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಡಿ.ವಿ.ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications