ರವಿ ಮದ್ಯಪಾನ ಮಾಡಿದ್ದರು ಅನ್ನೋದನ್ನು ನಾನು ನಂಬಲ್ಲ ಎಂದರು ಖಾದರ್
ಮಂಗಳೂರು, ಫೆಬ್ರವರಿ 19: "ಸಿ.ಟಿ.ರವಿ ಮದ್ಯಪಾನ ಮಾಡಿದ್ದರು ಅನ್ನೋದನ್ನು ನಾನು ನಂಬಲಾರೆ. ವೈಯಕ್ತಿಕವಾಗಿ ನನಗೆ ರವಿ ಪರಿಚಯಸ್ಥರು. ಒಳ್ಳೆ ಸ್ನೇಹಿತ ಕೂಡ. ಕಳೆದ ಹತ್ತು ವರ್ಷಗಳಿಂದ ನನಗೆ ಅವರ ಪರಿಚಯವಿದೆ. ಆದರೆ ಅವರು ಯಾವತ್ತೂ ಮದ್ಯಪಾನ ಮಾಡಿದ್ದು ಗಮನಿಸಿಲ್ಲ".
-ಹೀಗೆ ಹೇಳಿದ್ದು ಕಾಂಗ್ರೆಸ್ ನಾಯಕ ಹಾಗೂ ಸಚಿವ ಯು.ಟಿ.ಖಾದರ್. ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಅವರು ಮದ್ಯಪಾನ ಮಾಡಿ, ಕಾರು ಚಲಾಯಿಸಿ, ಇಬ್ಬರು ಮೃತಪಡಲು ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪವನ್ನು ನಾನು ನಂಬುವುದಿಲ್ಲ ಎಂದು ಬಿಜೆಪಿಯವರು ಅಲ್ಲ, ಕಾಂಗ್ರೆಸ್ ನ ಖಾದರ್ ಮಂಗಳವಾರ ಹೇಳಿದ್ದಾರೆ.
ಯಾವುದೇ ವಿಚಾರ ಗೊತ್ತಿಲ್ಲದೆ ಸುಖಾಸುಮ್ಮನೆ ಆರೋಪ ಹೊರಿಸಲಾರೆ. ಹಾಗೆ ಆರೋಪ ಹೊರಿಸುವುದು ಸರಿಯಲ್ಲ. ಅಪಘಾತದ ವೇಳೆ ಸಿ.ಟಿ.ರವಿ ಮದ್ಯಪಾನ ಮಾಡಿರಲಿಕ್ಕಿಲ್ಲ ಎಂದು ಭಾವಿಸು. ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟಿರುವುದು ಬೇಸರದ ವಿಚಾರ. ಅಪಘಾತದ ಬಗ್ಗೆ ರವಿ ಜೊತೆ ಮಾತಾಡುವೆ ಎಂದು ಅವರು ತಿಳಿಸಿದರು.

ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಫಾರ್ಚೂನರ್ ಕಾರು ಮಂಗಳವಾರ ನಸುಕಿನ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿ, ಯುವಕರಿಬ್ಬರು ಸಾವಿಗೀಡಾದರು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಊರ್ಕೇನಹಳ್ಳಿ ಸಮೀಪ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.
ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಸುನೀಲ್ ಕುಮಾರ್ (27) ಮತ್ತು ಶಶಿಕುಮಾರ್(28) ಸಾವಿಗೀಡಾಗಿದ್ದರು. ಈ ಸಂದರ್ಭದಲ್ಲಿ ಮೃತರ ಸಂಬಂಧಿಗಳು ಸಿ.ಟಿ.ರವಿ ಮದ್ಯಪಾನ ಮಾಡಿ, ಕಾರು ಚಲಾಯಿಸುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications