ತುಳುನಾಡಿನ ಸಿರಿಗಳ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು..? ಈ ವಿಶೇಷ ನಂಬಿಕೆಯ ಸವಿವರ ಇಲ್ಲಿದೆ
ಮಂಗಳೂರು, ಜನವರಿ 30: ತುಳುನಾಡಿನಲ್ಲಿ ನಾಗನಿಗೆ ನಾಗದರ್ಶನ, ನಾಗಮಂಡಲ, ದೈವಗಳಿಗೆ ಕೋಲ - ನೇಮ, ಮಾನ್ಯೆಚ್ಚಿ, ಮೆಚ್ಚಿ ಇರುವ ಹಾಗೆ ಸಿರಿಗಳಿಗೆ ಸಿರಿಜಾತ್ರೆ, ದಲ್ಯಕ್ಕೆ ನಿಲ್ಲಿಸುವುದೂ ಅಷ್ಟೇ ಪ್ರಸಿದ್ಧ. ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲಿ ಸಿರಿ ಜಾತ್ರೆಯೂ ಒಂದು.
ತುಳುನಾಡಿನಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಒಂದು ಅಂದಾಜು ಲೆಕ್ಕಾಚಾರ. ಇದರಲ್ಲಿ ಬೆಳ್ತಂಗಡಿ ತಾಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ಕೂಡ ಒಂದು. ಈ ಕ್ಷೇತ್ರದಲ್ಲಿ ಈ ಬಾರಿಯೂ ಸಿರಿ ಜಾತ್ರೆ ವಿಜೃಂಭಣೆಯಿಂದ ನಡೆದಿದೆ.

ಸಿರಿಗಳ ಆರಾಧನಾ ಸಂಕೀರ್ಣವನ್ನು ಸಿರಿ ಆಲಡೆ ಎಂದು ಕರೆಯಲಾಗುತ್ತದೆ. ಆಲಡೆ ಬ್ರಹ್ಮ, ನಾಗ, ನಂದಿಗೋಣ, ಲೆಕ್ಕೇಸಿರಿ ಹಾಗೂ ಕ್ಷೇತ್ರಪಾಲ ಇರುವ ತುಳುವರ ಆದಿದೈವ ಬೆರ್ಮರನ್ನು ನಂಬಿಕೊಂಡು ಬರುವ ಕ್ಷೇತ್ರ. ಮೊದಲು ಬ್ರಹ್ಮಸ್ಥಾನ ಆಗಿದ್ದ ಈ ಸ್ಥಳ ಪಂಚದೈವಗಳೊಟ್ಟಿಗೆ ಪರಿವಾರ ದೈವಗಳ ಆರಾಧನೆ ನಡೆಯುವ ಆಲಡೆ ಎಂದಾಗಿದೆ.
ಸದ್ಯ ಇತ್ತೀಚಿಗೆ ವೈದಿಕ ಪ್ರಭಾವಕ್ಕೊಳಗಾಗಿ ದೇವಾಲಯದ ಸ್ವರೂಪ ಪಡೆದಿದೆ. ತುಳುವರ ಆಲಡೆ ನಾಗನಿಗೆ ಮೂಲ, ಸಿರಿಗಳಿಗೆ ಆದಿ ಎಂದು ಕರೆಯಲಾಗುತ್ತದೆ. ಸಿರಿ ಪರಿವಾರದಲ್ಲಿ ಒಬ್ಬ ಕುಮಾರ, ಸಿರಿ, ಸೊನ್ನೆ, ಗಿಂಡೆ, ಅಬ್ಬಗ, ದಾರಗ, ದಾರು, ಸಾಮು ಎಂಬ ಏಳು ಸಿರಿಗಳಿದ್ದಾರೆ. ತಾಯಿ ಅಕ್ಕೆರಸು ಸಿರಿ, ಈಕೆಯ ಮಗ ಕುಮಾರ, ಮಗಳು ಸೊನ್ನೆ, ಸಾಕುಮಗಳು ಗಿಂಡೆ, ಸೊನ್ನೆಯ ಅವಳಿ ಮಕ್ಕಳು ಅಬ್ಬಗ - ದಾರಗರು, ಸಿರಿಯ ಕೆಲಸದ ಆಳುಮಗಳು ದಾರು, ಸಿರಿಯ ಎರಡನೇ ಗಂಡನ ಮೊದಲ ಪತ್ನಿ ಸೋಮು ಸಿರಿ ಬಳಗದಲ್ಲಿದ್ದಾರೆ.
ಆಲಡೆಗಳಲ್ಲಿ ಫೆಬ್ರವರಿಯಿಂದ ಮೇ ತಿಂಗಳ ನಡುವೆ ಹುಣ್ಣಿಮೆಯ ದಿನಗಳಲ್ಲಿ ಸಿರಿಜಾತ್ರೆ ನಡೆಯುತ್ತದೆ. ಕೆಲವು ಆಲಡೆಗಳಲ್ಲಿ ಹುಣ್ಣಿಮೆಯ ಮೊದಲ ದಿನ ಸಿರಿಜಾತ್ರೆ ನಡೆಯುತ್ತದೆ. ಸಿರಿಜಾತ್ರೆಯ ದಿನ ಆಲಡೆಗೆ ಹುರುಳಿ, ಅಕ್ಕಿ, ತೆಂಗಿನಕಾಯಿ, ಹಿಂಗಾರ, ಹೂ, ಯಥಾನುಶಕ್ತಿ ಹಣವನ್ನು ಹರಕೆಯನ್ನು ಸಲ್ಲಿಸಲಾಗುತ್ತದೆ. ಹಾಗೆಯೇ ಸಿರಿ ಹಾಗೂ ಕುಮಾರನಿಗೆ ದಲ್ಯಕ್ಕೆ ನಿಲ್ಲುವವರು ಮುಸ್ಸಂಜೆ ಆಗುತ್ತಿದ್ದಂತೆ ಆಲಡೆಗ್ ಬರುತ್ತಾರೆ.

ಸ್ನಾನ ಮಾಡಿ ಶುಚಿರ್ಭೂತರಾಗಿ ಮಡಿ ಬಟ್ಟೆ ಉಡುತ್ತಾರೆ. ಸಿರಿ ಆವೇಶಕ್ಕೆ ಒಳಗಾಗುವ ಮಹಿಳೆಯರು ಬಿಳಿಸೀರೆ, ಬಿಳಿ ರವಕೆ ತೊಟ್ಟು, ತಲೆತುಂಬಾ ಹೂ ಮುಡಿದು ಹಿಂಗಾರ ಹಿಡಿದುಕೊಂಡು ದಲ್ಯಕ್ಕೆ ನಿಲ್ಲುತ್ತಾರೆ. ಅಂದರೆ ಆವೇಶಕ್ಕೆ ಒಳಗಾಗುತ್ತಾರೆ. ಹಾಗೆಯೇ ಕುಮಾರ ಪಾತ್ರಿಗಳು ಕೆಂಪು ಪಟ್ಟೆಯ ಕಚ್ಚೆಹಾಕಿ, ಸೊಂಟಕ್ಕೆ ಬಿಳಿ ಬಟ್ಟೆಯ ಜಟ್ಟಿ ಕಟ್ಟುತ್ತಾರೆ. ಇವರೂ ಕೈಯಲ್ಲಿ ಹಿಂಗಾರ ಹಿಡಿದುಕೊಂಡು ದಲ್ಯಕ್ಕೆ ನಿಲ್ಲುತ್ತಾರೆ.
ಎಲ್ಲಾ ಆಲಡೆಗಳಲ್ಲೂ ಮೂಲದ ಕುಮಾರ, ಸ್ಥಳ ಕುಮಾರ ಹಾಗೂ ಒತ್ತು ಕುಮಾರ ಇರುತ್ತಾರೆ. ಇವರ ಗುಂಪಿನಲ್ಲಿ ಪರಂಪರೆಯಿಂದ ಸೇವೆ ಸಲ್ಲಿಸುತ್ತಾ ಬಂದು ಅನುಭವಿ ಸಿರಿಗಳು ಇರುತ್ತಾರೆ. ಕೆಲವು ಆಲಡೆಗಳಲ್ಲಿ ಬಂಟ, ಬಿಲ್ಲವ, ಕುಲಾಲ ಸೇರಿದಂತೆ ಪರಿಶಿಷ್ಟ ವರ್ಗ ಹೀಗೆ ಜಾತಿ ಆಧಾರವಾಗಿ ಬೇರೆಬೇರೆ ಸಿರಿ ಬಳಗದ ಗುಂಪು ಇರುತ್ತದೆ. ಇವರು ದರ್ಶನಾವೇಶಕ್ಕೆ ನಿಲ್ಲುವ ಸ್ಥಳಗಳು ಜಾತಿ ಆಧಾರವಾಗಿ ಪ್ರತ್ಯೇಕವಾಗಿ ಒರುತ್ತದೆ.
ದಲ್ಯಕ್ಕೆ ನಿಲ್ಲುವವರು ವಾರ, ತಿಂಗಳುಗಳಿಂದ ಮಡಿಯಲ್ಲಿ ಇರುತ್ತಾರೆ. ದೇವರ ಬಲಿ ಆದ ತಕ್ಷಣ ಮೂಲ ಕುಮಾರನಿಗೆ ಗರ್ಭಗುಡಿಯ ಎದುರು ಆವೇಶಕ್ಕೆ ಒಳಗಾಗುತ್ತಾನೆ. ಉಳಿದ ಗುಂಪು ತಮಗೆ ನಿಗದಿತವಾದ ಸ್ಥಳದಲ್ಲಿ ಬಿಳಿಯ ವಸ್ತ್ರ ಹಾಸಿ ಅದರ ಮೇಲೆ ನಿಂತು ಕೈಯಲ್ಲಿ ಹಿಂಗಾರ ಹಿಡಿದು ಸಾಲಾಗಿ ಅಥವಾ ವೃತ್ತಾಕಾರವಾಗಿ ನಿಂತು ದರ್ಶನಾವೇಶಕ್ಕೆ ನಿಲ್ಲುತ್ತಾರೆ. ಇದನ್ನು ದಲ್ಯಕ್ಕೆ ನಿಲ್ಲುವುದು ಎನ್ನುತ್ತಾರೆ. ಕುಮಾರ ಎಲ್ಲಾ ಸಿರಿಗಳ ಬಳಿಗೆ ಅತ್ತಿತ್ತ ಹೋಗಬೇಕಾಗಿದ್ದರಿಂದ ಈತ ತಾನು ಬಿಳಿ ಬಟ್ಟೆಯ ದಲಿಯ ಹಾಸೋಲ್ಲ.

ಮೂಲ ಕುಮಾರ ನಿಧಾನವಾಗಿ ದರ್ಶನಾವೇಶಕ್ಕೆ ಒಳಗಾಗಿ ಕ್ರಿಯೆಯ ವೇಗ ಹೆಚ್ಚುತ್ತಿದ್ದಂತೆ ಕೈಯಲ್ಲಿದ್ದ ಹಿಂಗಾರವನ್ನು ತನ್ನ ಮುಖಕ್ಕೆ ಉಜ್ಜಿಕೊಂಡು ಹಿಂದಕ್ಕೆ ಮುಂದಕ್ಕೆ ಚಲಿಸಿ ನಾರಾಯಿಣಾ... ನಾರಾಯಿಣಾ ಎಂದು ಸಿರಿಯ ಸಂಧಿ ಹೇಳಲು ಆರಂಭಿಸುತ್ತಾನೆ. ಆ ಬಳಿಕ ಅನುಭವಿ ಕುಮಾರ, ಅನುಭವಿ ಸಿರಿಗಳಿಗೂ ದರ್ಶನಾವೇಶ ಆರಂಭವಾಗುತ್ತದೆ. ಇವರ ಮಾರ್ಗದರ್ಶನದಲ್ಲಿ ಉಳಿದ ಸಿರಿ - ಕುಮಾರರಿಗೆ ದರ್ಶನಾವೇಶ ಹೊಂದಿ ಸಿರಿ ಸಂಧಿ ಹಾಡಿ ಕುಮಾರನಲ್ಲಿ ಸಂಭಾಷಣೆಗೆ ತೊಡಗುತ್ತಾನೆ. ಈ ಕ್ರಿಯೆ ರಾತ್ರಿಯಿಡೀ ನಡೆಯುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಸಿರಿಜಾತ್ರೆಗೆ ಸಿರಿಗಳ ಆವೇಶಕ್ಕೆ ಒಳಗಾಗುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ ಎಂದು ಹೇಳಬಹುದು. ನೂರಾರು ಸಂಖ್ಯೆಗಳಲ್ಲಿ ಸೇರುತ್ತಿದ್ದ ಸಿರಿಗಳು, ಕುಮಾರರ ಸಂಖ್ಯೆ ಇತ್ತೀಚಿಗೆ ಬೆರಳೆಣಿಕೆಯಷ್ಟರಲ್ಲಿಗೆ ಇಳಿದಿದೆ. ಸದ್ಯ ಸಿರಿ ಆವೇಶಕ್ಕೆ ಒಳಗಾಗುವವರು ದರ್ಶನಕ್ಕೆ ನಿಲ್ಲದೆ ಕೈಪರಕೆ ಅಂದರೆ ದೇವರಿಗೆ ಹರಕೆ ಸಲ್ಲಿಸಿ ಹೋಗುವ ಪದ್ಧತಿ ಬೆಳೆದಿದೆ. ಹಳೆಯ ತಲೆಮಾರಿನ ಹೆಂಗಸರು ಮಾತ್ರ ದಲಿಯಕ್ಕೆ ನಿಲ್ಲುತ್ತಾರೆ.












Click it and Unblock the Notifications