ಸುರತ್ಕಲ್ ಟೋಲ್ ತೆರವು ಮಾಡುವವರೆಗೂ ಹೋರಾಟ; ಹೋರಾಟ ಸಮಿತಿ
ಮಂಗಳೂರು, ಅಕ್ಟೋಬರ್, 16: ''ನಮ್ಮ ಮನೆಗೆ ನಿನ್ನೆ ತಡರಾತ್ರಿ ಬಂದ ಪೊಲೀಸರ ತಂಡ ಸಮನ್ಸ್ ನೀಡಿದೆ. ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಕಳುಹಿಸಿದ ಸಮನ್ಸ್ ನೋಟೀಸ್‌ನಲ್ಲಿ ನಮ್ಮನ್ನು ಏಕವಚನದಲ್ಲಿ ಕ್ರಿಮಿನಲ್ ರೀತಿ ಪದಗಳನ್ನು ಬಳಸಿ ನಿಂದಿಸಲಾಗಿದೆ. ಇದು ಬಿಜೆಪಿ ಪೊಲೀಸರ ನೀತಿಯೇ ಹಾಗಿರಬಹುದು'' ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಪೊಲೀಸರು ಐವತ್ತಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿದ್ದಾರೆ. ಹೋರಾಟಕ್ಕೆ ಸಂಬಂಧಿಸಿದಂತೆ ಕೆಲವು ಅಮಾಯಕರಿಗೂ ನೋಟಿಸ್ ಬಂದಿದೆ. ಕ್ರಿಮಿನಲ್‌ಗಳ ರೀತಿಯಲ್ಲಿ ಮನೆಗಳನ್ನು ಪೊಲೀಸರು ಸುತ್ತುವರೆದಿದ್ದಾರೆ. ನಾವೀಗ ದೃಢ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಕಾನೂನು ವಿಭಾಗದ ಜವಾಬ್ದಾರಿ ಹೊತ್ತಿರುವ ಜನಪರ ವಕೀಲರ ತಂಡದೊಂದಿಗೆ ಸಭೆ ನಡೆಸಿ ಕೆಲವು ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು
ಯಾವುದೇ ಕಾರಣಕ್ಕೂ ಮುಚ್ಚಳಿಕೆ ಬರೆದುಕೊಡುವುದಿಲ್ಲ. ವಾರಂಟ್ ಹೊರಡಿಸಿ ಬಂಧಿಸುವುದಾದರೆ ತುಳುನಾಡಿನ ಜನ ಸಾಮಾನ್ಯರ ಪರವಾಗಿ ಜೈಲಿಗೆ ಹೋಗಲು ಸಿದ್ದರಾಗುತ್ತೇವೆ. ಅಕ್ಟೋಬರ್ 18ರದಂದು ಅಕ್ರಮ ಟೋಲ್ ಸ್ಥಗಿತ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಾವು ಜೈಲು ಸೇರಿದರೂ ಕೂಡ ಅಂದು ಹೋರಾಟ ನಡೆಯುತ್ತದೆ. ನೂರಾರು ಸಂಘಟನೆ, ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಈ ಮಹತ್ವದ ಹೋರಾಟಕ್ಕೆ ನಾಯಕರುಗಳ ಕೊರತೆ ಇಲ್ಲ. ಸಂಚಾಲಕ ಮುನೀರ್ ಕಾಟಿಪಳ್ಳ ಜೈಲು ಸೇರಿದರೆ ನೂರಾರು ಜನ ಆ ಸ್ಥಾನವನ್ನು ತುಂಬಲು ಸಿದ್ಧರಿದ್ದಾರೆ. ನಮ್ಮ ಪ್ರತಿಭಟನೆ ಅಂದು ನಿಗದಿಯಂತೆ ಶಾಂತಿಯುತವಾಗಿ ನಡೆಯಲಿದೆ. ಯಾರೂ ಪ್ರಚೋದನೆಗೆ ಒಳಗಾಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ವಿರುದ್ದ ಹೋರಾಟ ಸಮಿತಿ ಕಿಡಿ
ಬಿಜೆಪಿ ಸರ್ಕಾರದ ದಾಳಿಯ ಸಂದರ್ಭದಲ್ಲಿ ತುಳುನಾಡಿನ ಸಮಸ್ತ ಜನತೆ ನಮ್ಮ ಜೊತೆ ನಿಲ್ಲಬೇಕು. ಧ್ವನಿಯನ್ನು ಮತ್ತಷ್ಟು ಎತ್ತರಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಗುಲಾಮಗಿರಿಯ ಸಂಕೇತವಾಗಿರುವ ಟೋಲ್ ಗೇಟ್ ಸುಲಿಗೆ ಮುಂದುವರಿಯಬಾರದು. ಮುಂದುವರಿಯಲು ಅವಕಾಶವನ್ನು ಕೊಡುವುದಿಲ್ಲ ಎಂದು ಒಕ್ಕೊರಲಿನಿಂದ ಗಟ್ಟಿಯಾಗಿ ಬಿಜೆಪಿ ಶಾಸಕ, ಸಂಸದ ಶಾಸಕರುಗಳಿಗೆ ಹೇಳುವಂತೆ ಆಗಬೇಕು. ಯಾವುದೇ ಕಾರಣಕ್ಕೂ ಹೋರಾಟ ಸೋಲುವುದಿಲ್ಲ. ಅಕ್ಟೋಬರ್ 18ರಂದು ಟೋಲ್ ಸಂಗ್ರಹ ಅಂತ್ಯಗೊಳ್ಳಲೇಬೇಕು. ನಮ್ಮ ಮೇಲೆ ಪೊಲೀಸ್ ದೌರ್ಜನ್ಯ ಹರಿಯಬಿಟ್ಟು ಬಿಜೆಪಿ ಶಾಸಕರುಗಳು ಬೀಗುವುದು ಬೇಡ. ಜನ ಆಕ್ರೋಶಗೊಂಡಿದ್ದು, ಅವರು ನಿಮಗೆ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.












Click it and Unblock the Notifications