ಹಿಜಾಬ್ ವಾಗ್ವಾದ; ವಿದ್ಯಾರ್ಥಿಗೆ ಕೊಲೆ ಬೆದರಿಕೆ-ದೂರು ದಾಖಲು
ಮಂಗಳೂರು, ಮಾ.4: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿದ್ದ ಹಿಜಾಬ್ ವಿವಾದ ರಾಜ್ಯದಲ್ಲಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ವಿವಾದ ತಣ್ಣಗಾದಂತೆ ಕಂಡುಬಂದರೂ ಅಲ್ಲಲ್ಲಿ ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಲೇ ಇವೆ.
ಮಂಗಳೂರಿನಲ್ಲಿ ಹಿಜಾಬ್ ವಿವಾದ ಈಗ ನಿಧಾನವಾಗಿ ಮತ್ತೆ ಗರಿಗೆದರುತಿದೆ. ನಗರದ ಡಾ ದಯಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಕುರಿತು ವಾಗ್ವಾದ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿದ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ರಾಜ್ಯದಾದ್ಯಂತ ಭುಗಿಲೆದ್ದಿದ್ದ ಹಿಜಾಬ್ ವಿವಾದ ಇತ್ತೀಚೆಗೆ ತಣ್ಣಗಾದಂತೆ ಕಂಡರೂ ಅಲ್ಲಲ್ಲಿ ಮಾತಿನ ಚಕಮಕಿ ಘರ್ಷಣೆಗಳು ನಡೆಯುತ್ತಿವೆ. ಉಡುಪಿಯಿಂದ ಮೊದಲುಗೊಂಡು ರಾಜ್ಯದ ವಿವಿಧ ಭಾಗಗಳಿಗೆ ಈ ವಿವಾದ ಪಸರಿಸಿ ಕೆಲವೆಡೆ ಈ ವಿವಾದ ಹಿಂಸಾರೂಪಕ್ಕೂ ತಿರುಗಿತ್ತು. ಕೆಲವೆಡೆ ಕೋಮು ಘರ್ಷಣೆಗೂ ಕಾರಣವಾಗಿತ್ತು. ಆದರೆ ಈ ವಿವಾದದಿಂದ ದೂರವೇ ಉಳಿದಿದ್ದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ನಿಧಾನವಾಗಿ ಹಿಜಾಬ್ ವಿವಾದ ಸದ್ದು ಮಾಡುತ್ತಿದೆ.

ಮಂಗಳೂರಿನ ಹೃದಯ ಭಾಗದಲ್ಲಿರುವ ಕಾರ್ ಸ್ಟ್ರೀಟ್ ಎಂಬಲ್ಲಿನ ಡಾ ಪಿ ದಯಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಸದ್ದು ಮಾಡುತ್ತಿದೆ. ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯೊಂದಿಗೆ ಕೆಲ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟ್ ಬಳಿ ತಡೆಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಲೇಜು ಕಚೇರಿ ಸಿಬ್ಬಂದಿ ಗಳೊಂದಿಗೆ ವಿದ್ಯಾರ್ಥಿನಿಯರ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಕಾಲೇಜಿನ ಕೆಲ ವಿದ್ಯಾರ್ಥಿ ಗಳೊಂದಿಗೂ ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಮಾತಿನ ಚಕಮಕಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ನಗರದ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರೊಂದಿಗೆ ವಾಗ್ವಾದ ನಡೆಸಿದ್ದ ವಿದ್ಯಾರ್ಥಿಗೆ ಈಗ ಕೊಲೆ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.












Click it and Unblock the Notifications