ರಾಜ್ಯ ಸರ್ಕಾರದ ಕೃಪೆಗಾಗಿ ಕಾಯುತ್ತಿದ್ದಾರೆ ಬಾರ್ ಮಾಲಕರು
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಬರುವ ಬಾರ್‌ಗಳ ತೆರವಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ತಮ್ಮ ಹಿತಾಸಕ್ತಿಯನ್ನು ರಾಜ್ಯ ಕಾಪಾಡುತ್ತದೆ ಎಂದು ಮಂಗಳೂರಿನ ಬಾರ್ ಮಾಲಕರು ಕಾಯುತ್ತಿದ್ದಾರೆ
ಮಂಗಳೂರು, ಏಪ್ರಿಲ್ 7: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಬರುವ ಬಾರ್‌ಗಳ ತೆರವಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ತಮ್ಮ ಹಿತಾಸಕ್ತಿಯನ್ನು ರಾಜ್ಯ ಸರ್ಕಾರ ಕಾಪಾಡುತ್ತದೆ. ನಮಗಾಗಿ ಕಾನೂನು ಮತ್ತು ನಿಯಮಗಳನ್ನೇ ಬದಲಾಯಿಸುತ್ತದೆ ಎಂದು ಮಂಗಳೂರಿನ ಬಾರ್ ಮತ್ತು ರೆಸ್ಟೋರೆಂಟ್ ಮಾಲಕರು ಕಾಯುತ್ತಿದ್ದಾರೆ.
ರಾಜ್ಯ ಹೆದ್ದಾರಿಗಳ ಹೆಸರನ್ನೇ ಬದಲಿಸಿ ಜಿಲ್ಲಾ ಅಥವಾ ನಗರ ರಸ್ತೆಗಳನ್ನಾಗಿಸಿ ಕಾನೂನಿಗೆ ತಿದ್ದುಪಡಿ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಉಪಚುನಾವಾಣೆ ಗಡಿಬಿಡಿಯಿಂದ ಹೊರ ಬಂದ ಬಳಿಕ ಬಾರ್ ಮಾಲಕರಿಗೆ ಪೂರಕ ಕಾನೂನು ತಿದ್ದುಪಡಿಯ ಪ್ರಕ್ರಿಯೆ ನಡೆಯಬಹುದು ಎಂದು ಕಾಯಲಾಗುತ್ತಿದೆ.[ಕಿಡಿಗೇಡಿಗಳ ಕೃತ್ಯಕ್ಕೆ ಕಣ್ಣೀರಿಡುತ್ತಿದ್ದಾಳೆ ಸುಳ್ಯದ ಜೀವನದಿ ಪಯಸ್ವಿನಿ]
ಹೆದ್ದಾರಿ ಅಂಚಿನ ಬಾರ್ ಗಳನ್ನು ಮುಚ್ಚುವುದರಿಂದ ರಾಜ್ಯ ಸರ್ಕಾರದ ಅಬಕಾರಿ ಆದಾಯಕ್ಕೆ ಹೊಡೆತ ಬೀಳಲಿದೆ. ಈ ನೆಪದಲ್ಲಿ ನ್ಯಾಯಾಲಯದ ಕಣ್ಣಿಗೆ ಮಣ್ಣೆರಚುವ ರೀತಿ ದಾರಿಯೇ ಬದಲಿಸುವ ಯೋಜನೆ ರೂಪುಗೊಳ್ಳುತ್ತಿದೆ.

ಸುಪ್ರೀಂ ಆದೇಶವನ್ನೇ ಪ್ರಶ್ನಿಸಿದ್ದ ಕರ್ನಾಟಕ
ಈ ಹಿಂದೆ ಹೆದ್ದಾರಿಯಿಂದ 500 ಮೀಟರ್ ಅಂತರದ ಬಾರ್ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರವೇ ಪ್ರಶ್ನಿಸಿತ್ತು. ಇದರ ಪರಿಣಾಮ ನಿಷೇಧವನ್ನೀಗ ನ್ಯಾಯಾಲಯ 220 ಮೀಟರ್ ಅಂತರಕ್ಕೆ ಇಳಿಸಿದೆ. ಇದೂ ಸಾಲದು ಎಂಬಂತೆ ರಾಜ್ಯ ಸರಕಾರ ಈಗ ಹೆದ್ದಾರಿಗಳೇ ಇಲ್ಲದಂತೆ ಮಾಡಲು ಸಿದ್ದವಾಗಿದೆ.

ಕಾನೂನಿಗೆ ತಿದ್ದುಪಡಿ
ಕಾನೂನಿಗೆ ತಿದ್ದುಪಡಿ ಮಾಡುವ ಬಗ್ಗೆ ಸಮಾಲೋಚನೆ ನಡೆದಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದಂತೆ ಇತರ ರಾಜ್ಯಗಳು ಅನುಸರಿಸುತ್ತಿರುವ ನಿಯಮಗಳ ಕುರಿತು ಸರ್ಕಾರ ಗಮನ ಹರಿಸಿದ್ದು, ರಾಜಸ್ಥಾನ ಸರ್ಕಾರ ನಗರದ ವ್ಯಾಪ್ತಿಯಲ್ಲಿ ಬರುವ ಹೈವೆಗಳನ್ನು ನಗರದ ರಸ್ತೆಗಳಿಗಾಗಿ ಬದಲಾಯಿಸುತ್ತಿದೆ. ಇದೇ ಮಾದರಿಯಲ್ಲಿ ನಾವು ಸಾಗುತ್ತೇವೆ ಎಂದು ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ರು ಈಗಾಗಲೇ ತಿಳಿಸಿದ್ದಾರೆ.[ನಾಳೆ ತಂದೆಯ ಅಸ್ಥಿ ವಿಸರ್ಜನೆಗೆ ಐಶ್ವರ್ಯಾ ರೈ ದಂಪತಿ ಮಂಗಳೂರಿಗೆ]

ಕಾನೂನು ತಿದ್ದುಪಡಿ ಮಾಡುತ್ತದೆ
ನಮಗಾಗಿ ರಾಜ್ಯ ಸರ್ಕಾರ ಕಾನೂನನ್ನೇ ತಿದ್ದುಪಡಿ ಮಾಡುತ್ತದೆ ಎಂಬ ವಿಶ್ವಾಸದಲ್ಲಿರುವ ಬಾರ್ ಮಾಲಕರು ಸದ್ಯಕ್ಕೆ ಹೆದ್ದಾರಿ ಪಕ್ಕದ ಬಾರ್ ಮತ್ತು ರೆಸ್ಟೋರೆಂಟ್‌ಗಳ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ವಾಸ್ತವದಲ್ಲಿ ಮಾರ್ಚ್ 31ಕ್ಕೆ ಮೊದಲೇ ತೆರವು ಕಾರ್ಯಾಚರಣೆ ನಡೆಯಬೇಕಿತ್ತು.

ರಾಜಸ್ತಾನದಲ್ಲಿ ಹೇಗೆ?
ರಾಜಸ್ತಾನದ ಪ್ರಮುಖ ನಗರ ಪ್ರದೇಶಗಳಲ್ಲಿ ಹಾದು ಹೋದ ಕೆಲ ರಾಜ್ಯ ಹೆದ್ದಾರಿಗಳಲ್ಲಿ ಬೈಪಾಸ್‌ಗಳನ್ನು ನಿರ್ಮಿಸಲಾಗಿದೆ. ಅಂತಹ ಪ್ರಕರಣಗಳಲ್ಲಿ ಮಾತ್ರ ಸೀಮಿತ ಪ್ರದೇಶವನ್ನು ಡಿನೋಟಿಫೈ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಂದೇ ಪ್ರದೇಶದಲ್ಲಿ ಒಂದೇ ಸಂಖ್ಯೆಯ ರಸ್ತೆಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ಬೈಪಾಸ್ ಇದ್ದ ಕಡೆ , ನಗರ ಪ್ರದೇಶಗಳಲ್ಲಿ ಹಾದು ಹೋಗುವ ರಸ್ತೆಗಳನ್ನು ಡಿನೋಟಿಫೈ ಮಾಡಲಾಗಿದೆ.

ನಗರದ ಬಾರ್ ಮಾಲಿಕರಿಗಷ್ಟೆಯಾ ಅನುಕೂಲ?
ಇದೇ ಮಾದರಿಯನ್ನು ಕರ್ನಾಟಕ ರಾಜ್ಯ ಸರ್ಕಾರವೂ ಅನುಸರಿಸುತ್ತದೆ ಎಂದಾದರೆ ಕೇವಲ ನಗರ ಪ್ರದೇಶಗಳಲ್ಲಿರುವ ಬಾರ್ ಮಾಲಕರಿಗಷ್ಟೆ ಅನುಕೂಲ ಆಗುತ್ತದೆ. ಅದೂ ಬೈಪಾಸ್ ಇದ್ದರೆ ಮಾತ್ರ ಅಥವಾ ಬಾರ್ ಮಾಲಕರ ಅನುಕೂಲಕ್ಕಾಗಿಯೇ ನೆಪಕ್ಕಷ್ಟೆ ಬೈಪಾಸ್ ರಸ್ತೆ ನಿರ್ಮಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.












Click it and Unblock the Notifications