ಕಂಬಳ ಪ್ರಿಯರಿಗೆ ಸಿಹಿಸುದ್ದಿ, ಜಾನಪದ ಕ್ರೀಡೆಗೆ ಹೈಟೆಕ್ ಟಚ್: ಇಲ್ಲಿದೆ ಸಂಪೂರ್ಣ ವಿವರ
ಮಂಗಳೂರು, ಫೆಬ್ರವರಿ 01: ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು ಕರಾವಳಿಯಾದ್ಯಂತ ಕಂಬಳ ಕ್ರೀಡೆಗೆ ಆಧುನಿಕ ಸ್ಪರ್ಶವನ್ನು ನೀಡಲು ಮುಂದಾಗಿದೆ. ನಿಖರ ಫಲಿತಾಂಶದೊಂದಿಗೆ ಕ್ರೀಡೆಯನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸುವ ಸಲುವಾಗಿ ನೂತನ ತಂತ್ರಜ್ಞಾನವುಳ್ಳ ಸ್ವಯಂಚಾಲಿತ ಸಮಯ ಗೇಟ್ ವ್ಯವಸ್ಥೆ ಹಾಗೂ ಫೋಟೋ ಫಿನಿಶ್ ಫಲಿತಾಂಶ ಅಳವಡಿಸಲು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ನಿರ್ಧಾರ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ, ಇತ್ತೀಚಿನ ದಿನಗಳಲ್ಲಿ ಕಂಬಳ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಭಾಗವಹಿಸುವ ಕೋಣಗಳ ಸಂಖ್ಯೆಯು ಹೆಚ್ಚಾಗಿದೆ. ಆದರೆ ನಿಗದಿತ ಸಮಯದಲ್ಲಿ ಕಂಬಳ ಕ್ರೀಡೆಯನ್ನು ಮುಕ್ತಾಯಗೊಳಿಸಲು ಕಷ್ಟವಾಗುತ್ತಿದೆ.

ಏಕೆಂದರೆ ಕ್ರೀಡೆಯ ಪ್ರಾರಂಭದಲ್ಲಿ ಕೋಣಗಳನ್ನು ಸರಿಯಾದ ಜಾಗದಲ್ಲಿ ನಿಲ್ಲಿಸುವುದು ಹಾಗೂ ಕೋಣಗಳ ಓಟದ ಮುಕ್ತಾಯ ಹಂತದಲ್ಲಿ ಯಾರು ಮೊದಲು ಮುಕ್ತಾಯ ಹಂತವನ್ನು ಮುಟ್ಟಿದರು ಇವೆಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಫಲಿತಾಂಶವನ್ನು ನೀಡಲು ಬಹಳ ಸಮಯ ತಗಲುತ್ತಿದೆ. ಇದನ್ನು ಮನಗಂಡು ಈ ನೂತನ ತಂತ್ರಜ್ಞಾನ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ನೂತನ ವ್ಯವಸ್ಥೆಯನ್ನು ಫೆಬ್ರವರಿ 3ರಂದು ನಡೆಯುವ ಐಕಳ ಕಂಬಳದಲ್ಲಿ ಅಳವಡಿಸಲಾಗುವುದು. ಈ ತಂತ್ರಜ್ಞಾನವನ್ನು ಎಲ್ಲಾ ಕಂಬಳಕ್ಕೂ ಅಳವಡಿಸಬೇಕು. ಈ ಮೂಲಕ ಸೂಕ್ತ ಫಲಿತಾಂಶ ದೊರೆಯುವುದರೊಂದಿಗೆ ಸಮಯವೂ ಉಳಿಯಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಕಂಬಳದಲ್ಲಿ ಆಯಾ ವಿಭಾಗಕ್ಕೆ ಕಂಬಳ ಸಮಿತಿ ಸಮಯವನ್ನು ನಿಗದಿಪಡಿಸಿದ್ದು, ಆ ಅವಧಿಯೊಳಗೆ ಕೋಣವನ್ನು ಬಿಡಬೇಕು. ಒಂದು ವೇಳೆ ಕೋಣ ಬಿಡದಿದ್ದರೆ ಗೇಟ್ ಬೀಳುತ್ತದೆ. ಇದಾದ ನೂರು ಸೆಕೆಂಡ್‌ನಿಂದ ಹತ್ತು ಸೆಕೆಂಡ್ ವರೆಗೆ ರೆಡ್ ಲೈಟ್, ಹತ್ತರಿಂದ ಒಂದು ಸೆಕೆಂಡ್‌ವರೆಗೆ ಹಳದಿ ಲೈಟ್, ಝಿರೋ ಸೆಕೆಂಡ್ ಆದಾಗ ಹಸಿರು ಲೈಟ್ ಬೀಳುತ್ತದೆ. ಈ ಅವಧಿಯಲ್ಲಿ ಕೋಣವನ್ನು ಬಿಡಬೇಕು. ಇಲ್ಲದಿದ್ದರೆ ಆ ಕೋಣವನ್ನು ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ ಎಂದು ದೇವಿಪ್ರಸಾದ್ ವಿವರಿಸಿದ್ದಾರೆ.
ಮತ್ತೊಂದು ಹೊಸ ತಂತ್ರಜ್ಞಾನ ಫೋಟೋ ಫಿನಿಶಿಂಗ್ ಕಂಬಳದಲ್ಲಿ ಅಳವಡಿಸಲಾಗಿದೆ. ಕೋಣಗಳ ಮುಖ ಸ್ಕ್ಯಾನ್ ಮೇಲೆ ನಿಖರ ಫಲಿತಾಂಶವನ್ನು ನೀಡಲಿದೆ. ಈ ತಂತ್ರಜ್ಞಾನ ಕಂಬಳದ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಹೇಳಿದರು.











Click it and Unblock the Notifications