ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ: ನಾಲ್ವರು ಶಂಕಿತ ಬಜರಂಗದಳ ಕಾರ್ಯಕರ್ತರ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹಿಂದೂ ಯುವತಿಯ ಜೊತೆಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಜರಂಗದಳದ ಕಾರ್ಯಕರ್ತರು ಎಂದು ಶಂಕಿಸಲಾದ ನಾಲ್ವರು ಯುವಕರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬಂಧಿತರನ್ನು ಒಳಮೊಗ್ರು ಗ್ರಾಮದ ನಿವಾಸಿ ಎಸ್ ಪ್ರದೀಪ್ (19), ಕೆದಂಬಾಡಿಯ ದಿನೇಶ್ ಗೌಡ (25), ಗುತ್ತುಮನೆಯ ನಿಶಾಂತ್ ಕುಮಾರ್ (19) ಮತ್ತು ಆರ್ಯಾಪು ಗ್ರಾಮದ ಪ್ರಜ್ವಲ್ (23) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿಯಲ್ಲಿ ತಿಳಿಸಿದೆ. ದಿನೇಶ್ ಗೌಡ ಎಂಬಾತ ಆಟೋ ಚಾಲಕನಾಗಿದ್ದು, ಉಳಿದವರು ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಕಾನೂನುಬಾಹಿರ ಸಭೆ, ಗಲಭೆ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ (IPC) ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮೇ 3ನೇ ತಾರೀಕಿನಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರೇಲ್ ಕಾಡುಮನೆ ನಿವಾಸಿ ಮೊಹಮ್ಮದ್ ಫರೀಷ್ (18) ತನ್ನ ಸಹಪಾಠಿ ಹಿಂದೂ ಯುವತಿಯೊಂದಿಗೆ ಪಾರ್ಲರ್‌ನಲ್ಲಿ ತಂಪು ಪಾನೀಯ ಕುಡಿಯುತ್ತಿದ್ದಾಗ ಜನರ ಗುಂಪೊಂದು ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ. ನಾಲ್ವರು ಯುವಕರು ಷರೀಫ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದು, ಗಂಭೀರವಾದ ಗಾಯಗಳಾಗಿವೆ. ಸದ್ಯ ಫರೀಷ್ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಜರಂಗದಳ ನಿಷೇಧ ವಿವಾದ ಬೆನ್ನಲ್ಲೇ ಘಟನೆ
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಸೇರಿದಂತೆ ಯಾವುದೇ ಧರ್ಮದ ಸಂಘಟನೆ ಸಂವಿಧಾನಕ್ಕೆ, ಸಮಾಜದ ಶಾಂತಿಗೆ ಭಂಗ ತಂದರೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಮಾತ್ರವಲ್ಲದೆ, ಅಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿದ್ದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಚುನಾವಣೆ ಹೊಸ್ತಿಲಿನಲ್ಲೇ ಬಿಜೆಪಿ ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಮತಗಳಿಕೆಯ ಲೆಕ್ಕಾಚಾರದಲ್ಲಿದೆ. ಬಜರಂಗದಳ ಕರ್ನಾಟಕ ರಾಜ್ಯ ಚುನಾವಣೆಯ ಪ್ರಮುಖ ದಾಳವಾಗುವ ಹೊಸ್ತಿಲಲ್ಲೇ ಈ ಘಟನೆ ನಡೆದಿದೆ. ಇಂತಹ ಘಟನೆಗಳ ಉದಾಹರಣೆ ನೀಡಿ ಕಾಂಗ್ರೆಸ್ ಕೂಡ ತನ್ನ ನಿಲುವನ್ನ ಸಮರ್ಥಿಸಿಕೊಳ್ಳುವ ಸಾಧ್ಯತೆ ಇದೆ.
ಮತದಾನದ ದಿನಾಂಕಕ್ಕೆ ಇನ್ನೂ 6 ದಿನಗಳು ಬಾಕಿ ಇದ್ದು ಬಜರಂಗದಳ ನಿಷೇಧ ವಿವಾದ ಇನ್ನಷ್ಟು ತಾರಕಕ್ಕೇರುವ ಸಾಧ್ಯತೆ ಇದೆ. ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications