• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಂಬಿ ಹರಿಯುತ್ತಿರುವ ನದಿಗಳು; ದಕ್ಷಿಣ ಕನ್ನಡಕ್ಕೆ ಬರಲು ಹಿಂದೇಟಾಕುತ್ತಿರುವ ಭಕ್ತರು

|

ಮಂಗಳೂರು, ಆಗಸ್ಟ್ 7: ಕರಾವಳಿಯಲ್ಲಿ ವರುಣನ ಅಬ್ಬರ ಇಂದು ಮುಂಜಾನೆಯಿಂದ ಸ್ವಲ್ಪ ಕುಗ್ಗಿದೆ. ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಕಡಲು ಕೂಡ ಪ್ರಕ್ಷುಬ್ಧಗೊಂಡಿದ್ದು, ತೀವ್ರ ಕಡಲ್ಕೊರೆತದಿಂದಾಗಿ ಸಮುದ್ರ ಬದಿ ನಿವಾಸಿಗಳು ಆತಂಕಿತರಾಗಿದ್ದಾರೆ. ಹವಾಮಾನ‌ ಇಲಾಖೆ ಎರಡು ದಿನಗಳ‌ ಕಾಲ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯ ಶಾಲೆ- ಕಾಲೇಜಿಗೆ ಘೋಷಿಸಲಾಗಿತ್ತು.

ನಿನ್ನೆಯಿಂದ ಇವತ್ತು ಮುಂಜಾನೆವರೆಗೂ ಬಿಟ್ಟು ಬಿಟ್ಟು ಭಾರೀ ಮಳೆ ಸುರಿದಿದ್ದು, ಇಂದು ಮುಂಜಾನೆಯಿಂದ ಮಳೆ ಕಡಿಮೆಯಾಗಿದೆ. ಜಿಲ್ಲೆಯ ಮುಡಿಪು, ವಿಟ್ಲ, ಸಿರಿಬಾಗಿಲು ಮುಂತಾದೆಡೆ ಭೂಕುಸಿತ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಜಿಲ್ಲಾದ್ಯಂತ ಶಾಲೆ, ಕಾಲೇಜಿಗೆ ರಜೆ ಘೋಷಿಸಿದ್ದು, ಖಾಸಗಿ ಹಾಗೂ ಸರಕಾರಿ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೂ ಇಂದು ರಜೆ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ದೊರಕಿರುವುದರಿಂದ ಮೀನುಗಾರರು ಮೂರು ದಿನ ಸಮುದ್ರಕ್ಕೆ ಹೋಗದಂತೆ ಎಚ್ಚರಿಕೆ ಕೂಡಾ ರವಾನಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ, ಎರಡು ದಿನ ರೆಡ್ ಅಲರ್ಟ್

ಮಳೆಯೊಂದಿಗೆ ಕಡಲು ಕೂಡಾ ಪ್ರಕ್ಷುಬ್ಧುಗೊಂಡಿದ್ದು, ಕಡಲ್ಕೊರೆತ ತೀವ್ರಗೊಂಡಿದೆ. ಉಳ್ಳಾಲ, ಸೋಮೇಶ್ವರ, ಮುಕ್ಕಚ್ಚೇರಿಯಲ್ಲಿ ಕಡಲಿಗೆ ಹಾಕಿದ ಕಲ್ಲುಗಳು ಕೊಚ್ಚಿಕೊಂಡು ಹೋಗಿದ್ದು, ಸುಮಾರು 30ಕ್ಕಿಂತಲೂ ಮಿಕ್ಕಿ ಮನೆಗಳು ಕಡಲು ಪಾಲಾಗುವ ಆತಂಕ ಎದುರಿಸುತ್ತಿದೆ. ಸೋಮೇಶ್ವರದ ಬೆಟ್ಟಂಪಾಡಿಯಲ್ಲಂತೂ ಜನರು ಸಂಚರಿಸುವ ರಸ್ತೆಯನ್ನು ಕೂಡಾ ಸಮುದ್ರ ಆಹುತಿ ಪಡೆಯುತ್ತಿದೆ. ಬೆಟ್ಟಂಪಾಡಿ ಪ್ರದೇಶದಲ್ಲಿ ಹಲವು ತೆಂಗು, ಮರಗಳು ಸಮುದ್ರಪಾಲಾಗಿವೆ. ಸೋಮೇಶ್ವರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ತಡೆಗೋಡೆ ಬಿರುಕು ಬಿಟ್ಟಿದೆ ಎಂದು ಹೇಳಲಾಗಿದೆ.

ಉಚ್ಚಿಲ ಬೆಟ್ಟಂಪಾಡಿಯಲ್ಲಿ ಸಮುದ್ರದ ಅಲೆಗಳು ರಸ್ತೆಯವರೆಗೆ ನುಗ್ಗಿದೆ. ಇದರಿಂದ ರಸ್ತೆಗೆ ಹಾನಿಯುಂಟಾಗಿದ್ದು, ಸಂಚಾರಕ್ಕೆ ತೊಡಕುಂಟಾಗಿದೆ. ಸೋಮೇಶ್ವರ ಪೇರಿಬೈಲು ಎಂಬಲ್ಲಿ ಮೋಹನ್ ಎಂಬುವರ ಮನೆಯ ಹಿಂಭಾಗಕ್ಕೆ ಸಮುದ್ರದ ಭಾರೀ ಅಲೆಗಳು ಅಪ್ಪಳಿಸುತ್ತಿವೆ. ಇದರಿಂದ ಮನೆ ಸಮುದ್ರಪಾಲಾಗುವ ಭೀತಿ ಎದುರಾಗಿದೆ.

ಉಳ್ಳಾಲ, ಸೋಮೇಶ್ವರದಲ್ಲಿ ಮಳೆಗೆ ಮತ್ತೆ ಕಡಲ್ಕೊರೆತ

ಈ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಕಡಲ್ಕೊರೆತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಬಾರಿ ಸಂತ್ರಸ್ತರಿಗೆ ಮಾಜಿ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಜಿಲ್ಲಾಡಳಿತ ಪರಿಹಾರ ಒದಗಿಸಿ, ಬೇರೆಡೆ ಸೂರು ಒದಗಿಸುವ ಯೋಜನೆ ರೂಪಿಸಿದ್ದರು. ಆದರೆ, ಈವರೆಗೆ ಸ್ಥಳೀಯರಿಗೆ ಪರಿಹಾರವೂ ಒದಗಿಲ್ಲ, ಸೂರು ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ವ್ಯಾಪ್ತಿಯಲ್ಲಿ ನೆಲೆಸಿರುವ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಸರಕಾರದಿಂದ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಉಕ್ಕಿ ಹರಿಯುತ್ತಿದೆ. ಅದಲ್ಲದೇ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳ ಕೆಲ ಮನೆಗಳು ಜಲಾವೃತವಾಗಿವೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾನೆಯಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ನೀರಿನ ಹರಿವು ಹೆಚ್ಚಾಗಿದ್ದು ನೀರಿನ ಮಟ್ಟ 24 ಮೀಟರ್‌ ಗೆ ಏರಿದೆ. ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಹರಿವಿಗೆ ತಡೆಯಾಗುತ್ತಿದೆ. ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿ ನೀರು ದೇವಾಲಯದ ಆವರಣವನ್ನು ಪ್ರವೇಶಿಸುತ್ತಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಾರೆಯಿಂದ ಪೆರುವಾಜೆ ,ಕುಂಡಡ್ಕ,ನಾಡೋಳಿ ,ಸಾರಕರೆ, ಸರ್ವೆ ಮೂಲಕ ವೀರಮಂಗಲ ಕುಮಾರಧಾರಾ ತಲುಪುವ ಗೌರಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದೆ.

ಮುಂದುವರೆದಿದೆ ಮಳೆ, ಭಾರೀ ಕಡಲ ಕೊರೆತ

ನಿರಂತರವಾಗಿ ಮಳೆ ಸುರಿದರೆ ಹೊಳೆ ತಟದ ಕೃಷಿ ತೋಟಗಳು ಮುಳುಗಡೆಯಾಗುವ ಆತಂಕ ವ್ಯಕ್ತಪಡಿಸಲಾಗಿದೆ. ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆಯಲ್ಲಿ ಗೌರಿಹೊಳೆಗೆ ಅಡ್ಡಲಾಗಿರುವ ಕುಂಡಡ್ಕ ಕಿರು ಸೇತುವೆಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ.

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರಧಾರ ನದಿಯಲ್ಲಿ ಉಕ್ಕಿ ಹರಿಯುತ್ತಿದೆ. ಕ್ಷೇತ್ರದ ಸ್ನಾನ ಘಟ್ಟ ನೆರೆಯಿಂದಾಗಿ ಸಂಪೂರ್ಣ ಮುಳುಗಡೆಗೊಂಡಿದೆ. ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಈ ವರ್ಷ ಮೊದಲ ಬಾರಿಗೆ ಸುಬ್ರಹ್ಮಣ್ಯದ ಸ್ನಾನ ಘಟ್ಟ ಮುಳುಗಡೆಯಾಗಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಸ್ನಾನಘಟ್ಟದಲ್ಲಿ ತೀರ್ಥ ಸ್ನಾನ ಮಾಡಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೂಡ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು ಸ್ನಾನ ಘಟ್ಟದ ಮೇಲೆ ಹರಿಯುತ್ತಿರುವ ನೀರಿನಲ್ಲೇ ಭಕ್ತಾದಿಗಳು ತೀರ್ಥಸ್ನಾನ ಮಾಡುತ್ತಿದ್ದಾರೆ. ಉಪ್ಪಿನಂಗಡಿ- ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹೊಸ್ಮಠ ಸೇತುವೆಯೂ ನದಿ ನೀರು ಹರಿಯುತ್ತಿದೆ. ಈ ಪರಿಣಾಮ ಸೇತುವೆ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಮಳೆ ಅಬ್ಬರ ಹೆಚ್ಚಿರುವ ಕಾರಣ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಚಾರ್ಮಾಡಿ ಮತ್ತು ಶಿರಾಡಿ ಘಾಟ್ ನಲ್ಲಿ ಭೂಕುಸಿತ ಉಂಟಾಗುತ್ತಿರುವ ಕಾರಣ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ಪ್ರಯಾಣಿಕರು ಪರದಾಡುವಂತಾಗಿದೆ.

English summary
Due to heavy rain in the western ghat range and region around Sullia and Belthangadi area has caused the river Netharvathi and Kumaradhara to go in full spate. flood situation in Nethravathi and Kumaradhara river bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X