ನಕಲಿ ಚಿನ್ನಾಭರಣ ಮಾರಾಟ ಯತ್ನ ವ್ಯಕ್ತಿಯ ಬಂಧನ
ಮಂಗಳೂರು, ಜೂನ್ 07: ನಕಲಿ ಚಿನ್ನಾಭರಣವನ್ನು ಅಸಲಿ ಎಂದು ನಂಬಿಸಿ ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ನಾಗ್ಪುರ್ ನಿವಾಸಿ ಪ್ರವೀಣ್ ವೀರಾ ರಾತೋಡ್ (21) ಎಂದು ಗುರುತಿಸಲಾಗಿದೆ.
ಮಂಗಳೂರು ಹೊರವಲಯದ ತೊಕ್ಕೊಟು ಎಂಬಲ್ಲಿನ ಎಸ್.ಮೈ.ಶಾಪ್ ಫ್ಯಾನ್ಸಿ ಮಳಿಗೆಗೆ ಆಗಮಿಸಿ ನಕಲಿ ಚಿನ್ನಾಭರಣವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 900 ಗ್ರಾಂ ತೂಕದ ನಕಲಿ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಸುಳ್ಳು ಸಂದೇಶ ರವಾನೆ: ಇಬ್ಬರು ವ್ಯಕ್ತಿಗಳ ಬಂಧನ
ತೊಕ್ಕೊಟು ಎಂಬಲ್ಲಿನ ಹರಿಪ್ರಸಾದ್ ಕಾಂಪ್ಲೆಕ್ಸ್ ನಲ್ಲಿರುವ ಎಸ್.ಮೈ. ಶಾಪ್ ಫ್ಯಾನ್ಸಿ ಅಂಗಡಿಗೆ ಬಂದ ಆರೋಪಿ ಪ್ರವೀಣ್ , ಫ್ಯಾನ್ಸಿ ಅಂಗಡಿ ಮಾಲಕ ಲೊಕೇಶ್ ಕುಮಾರ್ ಅವರ ಬಳಿ ನಕಲಿ ಚಿನ್ನದ ಆಭರಣಗಳನ್ನು ಅಸಲಿಯ ಚಿನ್ನದ ಆಭರಣಗಳೆಂದು ಹೇಳಿ ನಂಬಿಸಿದ್ದಾನೆ. ಈ ಚಿನ್ನಾಭರಣ ಭೂಮಿ ಅಗೆಯುವಾಗ ದೊರೆತಿದ್ದು, ಅತ್ಯಂತ ತುರ್ತು ಪರಿಸ್ಥಿತಿ ಎದುರಾಗಿದ್ದು ಈ ಕಾರಣ ಚಿನ್ನಾಭರಣ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಕ್ಕೆ ಕೇವಲ 3 ಲಕ್ಷ ರೂಪಾಯಿ ನೀಡುವಂತೆ ಆರೋಪಿ ಪ್ರವಿಣ್ ಹೇಳಿದ್ದಾನೆ. ಈ ಕುರಿತು ಸಂಶಯಗೊಂಡ ಫ್ಯಾನ್ಸಿ ಅಂಗಡಿ ಮಾಲಿಕ ಲೊಕೇಶ್ ಸ್ಥಳೀಯ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪರಿಣಾಮ ನಕಲಿ ಚಿನ್ನಾಭರಣವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಆರೋಪಿ ಪ್ರವೀನ್ ವೀರಾ ರಾಥೋಡ್ ನನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಆರೋಪಿ ಪ್ರವೀಣ್ ರಾಥೋಡ್ ನೊಂದಿಗಿದ್ದ ಮತ್ತೊಬ್ಬ ಪರಾರಿಯಾಗಿದ್ದಾನೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !