ಹಾಸನ-ಮಂಗಳೂರು ಮಾರ್ಗ ವಿದ್ಯುದೀಕರಣ, ವಂದೇ ಭಾರತ್ ಅಪ್‌ಡೇಟ್
ಮಂಗಳೂರು, ಡಿಸೆಂಬರ್ 04; ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಕು ಎನ್ನುವ ಬೇಡಿಕೆ ಇದೆ. ಆದರೆ ಈ ರೈಲು ಓಡಿಸಲು ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಈ ಕುರಿತು ಈಗ ಅಪ್‌ಡೇಟ್ ಒಂದು ಸಿಕ್ಕಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿಗಳು ಹಾಸನ-ಮಂಗಳೂರು ಮಾರ್ಗದ ರೈಲು ಮಾರ್ಗ ವಿದ್ಯುದೀಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರದಲ್ಲಿ ಸಕಲೇಶಪುರ-ಸುಬ್ರಮಣ್ಯ ಘಾಟ್ ನಡುವಿನ 55 ಕಿ. ಮೀ. ರೈಲು ಮಾರ್ಗ ಸಹ ಸೇರಿದೆ. ಕಳೆದ ಶನಿವಾರ ನೈಋತ್ಯ ರೈಲ್ವೆ ಕಾಮಗಾರಿಗಳ ಪರಿಶೀಲನೆಯ ಸಭೆಯೊಂದು ನಡೆದಿದೆ. ಈ ಸಭೆಯಲ್ಲಿ ಘಾಟ್ ವ್ಯಾಪ್ತಿಯಲ್ಲಿ ಬರುವ ರೈಲು ಮಾರ್ಗದ ವಿದ್ಯುದೀಕರಣದ ಕುರಿತು ಚರ್ಚೆಯಾಗಿದೆ.

2024ರಲ್ಲಿ ಕಾಮಗಾರಿ ಆರಂಭ; ಬೆಂಗಳೂರು-ಮಂಗಳೂರು ಮಾರ್ಗದಲ್ಲಿನ ಪ್ರಮುಖ ಪ್ರದೇಶವಾದ ಸಕಲೇಶಪುರ-ಸುಬ್ರಮಣ್ಯ ಘಾಟ್ ರೈಲು ಮಾರ್ಗದ ವಿದ್ಯುದೀಕರಣದ ಕುರಿತು ಕೆಲವು ದಿನಗಳ ಹಿಂದೆ ಸಮೀಕ್ಷೆ ನಡೆಸಲಾಗಿದೆ. ವರದಿ ಸಹ ಇಲಾಖೆಯ ಕೈ ಸೇರಿದೆ. 2024ರ ಜನವರಿಯಲ್ಲಿ ವಿದ್ಯುದೀಕರಣ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಸೇವೆಯ ಕುರಿತು ಮಾತನಾಡಿದ್ದಾರೆ. ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಬಾಕಿ ಇರುವ ವಿದ್ಯುದೀಕರಣ ಪೂರ್ಣಗೊಂಡರೆ ರಾಜಧಾನಿ ಮತ್ತು ಕರಾವಳಿ ನಡುವೆ ವಂದೇ ಭಾರತ್ ರೈಲು ಓಡಿಸಲು ಅನುಕೂಲವಾಗಲಿದೆ. ಈ ಮಾರ್ಗದ ಪ್ರಸ್ತಾವನೆಯನ್ನು ಸಹ ಕಳಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.
ನವೆಂಬರ್‌ನಲ್ಲಿ ಟ್ವೀಟ್ ಮಾಡಿದ್ದ ನಳಿನ್ ಕುಮಾರ್ ಕಟೀಲ್, 'ಮಂಗಳೂರು-ಮಡಗಾಂ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ. ಇನ್ನು ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು' ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಸದ್ಯ ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ ಮತ್ತು ಯಶವಂತಪುರ-ಕಾಚಿಗುಡ ಸೇರಿ ಮೂರು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲಾಗುತ್ತಿದೆ. ರಾಜ್ಯದಲ್ಲಿ ವಂದೇ ಭಾರತ್ ರೈಲಿಗಾಗಿ ಬೇಡಿಕೆ ಇರುವ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ನಡುವಿನ ರೈಲು ಸಹ ಸೇರಿದೆ. ವಂದೇ ಭಾರತ್ ರೈಲು ವಿದ್ಯುತ್ ಚಾಲಿತ, ಆದ್ದರಿಂದ ರಾಜಧಾನಿ-ಕರಾವಳಿ ನಡುವೆ ಓಡಿಸಲು ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ಮಂಗಳೂರು-ಸೆಂಟ್ರಲ್ ಕಬಕ ಪುತ್ತೂರು ರೈಲು; ನೈಋತ್ಯ ರೈಲ್ವೆಯ ಪರಿಶೀಲನಾ ಸಭೆಯಲ್ಲಿ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಸಂಜೆ ರೈಲನ್ನು ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇರುವ ಕುರಿತು ಚರ್ಚೆ ನಡೆಯಿತು.
ಆಗ ಅಧಿಕಾರಿಗಳು ಕಬಕ ಪುತ್ತೂರು ಮತ್ತು ಸುಬ್ರಮಣ್ಯ ರೋಡ್ ನಡುವಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಒಂದು ತಿಂಗಳು ಬೇಕಾಗಿದೆ. ಬಳಿಕ ಮೆಮು ರೈಲು ನಿರ್ವಹಣಾ ವ್ಯವಸ್ಥೆ ಸಿಗಲಿದೆ. ಬಳಿಕ ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರೋಡ್ ನಡುವೆ ಮೆಮು ರೈಲು ಓಡಿಸಲಾಗುತ್ತದೆ ಎಂದು ಹೇಳಿದರು.
ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಸುಬ್ರಮಣ್ಯ ರೋಡ್ ರೈಲು ನಿಲ್ದಾಣವನ್ನು 23 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಮಂಗಳೂರು ಸೆಂಟ್ರಲ್‌ನಲ್ಲಿ ನಿಲ್ಲುವ ದೂರದ ರೈಲುಗಳನ್ನು ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಬಹುದು ಎಂದು ಅಧಿಕಾರಿಗಳು ವಿವರಣೆ ನೀಡಿದರು.












Click it and Unblock the Notifications