'ನೀತಿ ಸಂಹಿತೆಯ ಹೆಸರಿನಲ್ಲಿ ಅಧಿಕಾರಿಗಳು ದರ್ಬಾರ್ ನಡೆಸುತ್ತಿದ್ದಾರೆ'
ಮಂಗಳೂರು, ಮಾರ್ಚ್ 13:ಚುನಾವಣಾ ನೀತಿ ಸಂಹಿತೆಯ ಹೆಸರಿನಲ್ಲಿ ಅಧಿಕಾರಿಗಳು ದರ್ಬಾರ್ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀತಿ ಸಂಹಿತೆಯ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಜನ ಸಾಮಾನ್ಯರ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತಿದ್ದಾರೆ. ಅಧಿಕಾರಿಗಳು ತಮ್ಮ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನಡೆಯುವ ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಅಲೆದಾಡಿಸುವುದು, ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ವೇದಿಕೆಗೆ ಕರೆಯಬಾರದು ಎಂದು ಒತ್ತಾಯಿಸುವುದು, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬಾರದು ಎಂದು ಸೂಚಿಸುವುದು, ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲು ಅಡ್ಡಿಪಡಿಸುತ್ತಿರುವ ಹಲವಾರು ದೂರುಗಳು ಬಂದಿವೆ ಎಂದು ಡಿಸೋಜಾ ಆರೋಪಿಸಿದರು.

ಚುನಾವಣೆ ಎಂಬುದು ತುರ್ತುಪರಿಸ್ಥಿತಿ ಎಂಬಂತೆ ಅಧಿಕಾರಿಗಳು ಬಿಂಬಿಸುವುದು ಸರಿಯಲ್ಲ. ಚುನಾವಣೆ ಎಂಬುದು ಸಾರ್ವತ್ರಿಕ ಹಬ್ಬವಾಗಿದೆ. ಜನರು ತಮ್ಮ ಪಾತ್ರ ಏನು ಎಂಬುದನ್ನು ಪರಸ್ಪರ ಸಂವಹನ ನಡೆಸುವ ಮುಕ್ತ ಅವಕಾಶ ಇರಬೇಕು. ನೀತಿ ಸಂಹಿತೆಯ ಹೆಸರಿನಲ್ಲಿ ಜನರ ಶೋಷಣೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಡಿಸೋಜಾ ತಿಳಿಸಿದರು.












Click it and Unblock the Notifications