ಸಮಾಜ ಸೇವಕ ಕೆ. ಸದಾನಂದ ನಾಯಕ್ ಇಂದಾಜೆ ನಿಧನ
ಮಂಗಳೂರು, ಜುಲೈ, 17: ಪ್ರಗತಿಪರ ಕೃಷಿಕ, ಶೈಕ್ಷಣಿಕ ತಜ್ಞ, ಸಾಮಾಜಿಕ ಹೋರಾಟಗಾರ, ಸಮಾಜ ಸೇವಕ ಕೆ. ಸದಾನಂದ ನಾಯಕ್ ಇಂದಾಜೆ(80) ಶುಕ್ರವಾರ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಹುಟ್ಟೂರಾದ ಪುತ್ತೂರಿನ ಸುಳ್ಯಪದವಿನಲ್ಲಿ ಇಂದು ನಡೆದಿದೆ.
ಸದಾ ಹಾಸ್ಯಪ್ರವೃತ್ತಿಯಿಂದ ಕೂಡಿದ್ದ ನಾಯಕ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜಿಎಸ್ ಬಿ ಸಮಾಜದಲ್ಲಿ 'ಸದ್ ಮಾಮ್' ಎಂದೇ ಖ್ಯಾತರಾಗಿದ್ದ ಇವರು ಸದಾ ಚೈತನ್ಯಭರಿತ ವ್ಯಕ್ತಿ. ಸುಳ್ಯಪದವಿನ ಸರ್ವೋದಯ ಪ್ರೌಢಶಾಲೆ, ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ಸಂಚಾಲಕರಾಗಿ ಹಳ್ಳಿಯೊಂದರಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರು. ಹಲವು ಸಂಘ ಸಂಸ್ಥೆಗಳಿಗೆ ದೇಣಿಗೆ ಸಲ್ಲಿಸಿದ್ದು, ಗ್ರಾಮದ ಒಳಿತಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ ಇವರು ಮಹಾನ್ ದೈವಭಕ್ತರಾಗಿದ್ದರು.[ಯುಜಿಸಿ ಪಾರಂಪರಿಕ ಪಟ್ಟಿಗೆ ಮಂಗಳೂರು ವಿವಿ ಕಾಲೇಜ್]

ವೆನ್ಲಾಕ್ ಸಹಾಯ ಕೇಂದ್ರದ ಗಣೇಶ್ ನಾಯಕ್, ಪುತ್ತೂರಿನ ಚಾರ್ಟೆಡ್ ಅಕೌಟೆಂಟ್ ದಾಮೋದರ ನಾಯಕ್, ಉದ್ಯಮಿ ಆರ್.ಕೆ. ನಾಯಕ್, ಮಂಗಳೂರಿನ ಖ್ಯಾತ ವೈದ್ಯ ಡಾ. ಸುಬ್ರಾಯ ನಾಯಕ್, ಉದ್ಯಮಿ ವರದರಾಜ ನಾಯಕ್, ಉದಯ ಟಿವಿಯ ಮಂಗಳೂರು ಜಿಲ್ಲಾ ವರದಿಗಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಪುತ್ತೂರಿನ ಪತ್ರಕರ್ತ ಮಾದವ ನಾಯಕ್, ಉದ್ಯಮಿ ವೆಂಕಟೇಶ್ ನಾಯಕ್ ಸೇರಿದಂತೆ 8 ಪುತ್ರರು ಹಾಗೂ 5 ಪುತ್ರಿಯರನ್ನು ಅಗಲಿದ್ದಾರೆ.
ಕೇಂದ್ರ ಕಾನೂನು ಸಚಿವ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ಕ್ರೀಡಾ ಸಚಿವ ಅಭಯಚಂದ್ರ ಜೈನ್, ನಗರಾಭಿವೃದ್ಧಿ ಖಾತೆ ಸಚಿವ ವಿನಯ ಕುಮಾರ್ ಸೊರಕೆ, ಸ್ಥಳೀಯ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸಂತಾಪ ಸೂಚಿಸಿದ್ದಾರೆ.












Click it and Unblock the Notifications