ಜಾತಿ ಮಾನದಂಡದಲ್ಲಿ ಸಚಿವ ಸ್ಥಾನ ಬೇಡ್ವೇಬೇಡ; ಹಾಲಾಡಿ ಶ್ರೀನಿವಾಸ ಶೆಟ್ಟಿ
ಮಂಗಳೂರು, ಆಗಸ್ಟ್ 30: "ಜಾತಿಯ ಲೆಕ್ಕಾಚಾರದಲ್ಲಿ ಹಾಗೂ ಜಾತಿಯನ್ನೇ ಅರ್ಹತೆಯ ಮಾನದಂಡವಾಗಿರಿಸಿ ನನಗೆ ಮಂತ್ರಿ ಸ್ಥಾನ ನೀಡಬೇಡಿ, ಒಂದು ವೇಳೆ ಮಂತ್ರಿ ಸ್ಥಾನ ನೀಡುವುದಾದರೆ ನಾನು ಪಕ್ಷಕ್ಕೆ ದುಡಿದಿರುವುದನ್ನು ಪರಿಗಣಿಸಿ ನೀಡಿ" ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು ಅವರು, "ಜಾತಿಯನ್ನಷ್ಟೇ ಮಾನದಂಡವಾಗಿಟ್ಟುಕೊಂಡು ನನಗೆ ಮಂತ್ರಿ ಪದವಿ ಕೊಡಬೇಡಿ. ನಾನು ಪಕ್ಷಕ್ಕಾಗಿ ದುಡಿದಿರುವುದನ್ನು ಪರಿಗಣಿಸಿ, ನನಗೆ ಜಾತಿ ಹೊರತುಪಡಿಸಿ ಇರುವ ಅರ್ಹತೆಯನ್ನು ಪರಿಗಣಿಸಿ. ಸಾಮಾಜಿಕ ನ್ಯಾಯಕ್ಕಾಗಿ ದುಡಿದವನು ನಾನು, ನನ್ನ ಈ ಅರ್ಹತೆಯನ್ನಷ್ಟೇ ಪರಿಗಣಿಸಿ" ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಮನವಿ ಮಾಡಿದ್ದಾರೆ.
ಪಕ್ಷದ ವಿಚಾರಧಾರೆ, ಸಿದ್ಧಾಂತ, ಶಿಸ್ತಿನಲ್ಲಿ ರಾಜಿ ಮಾತೇ ಇಲ್ಲ ಎಂದ ನಳಿನ್ ಕುಮಾರ್ ಕಟೀಲ್
"ನನ್ನ ಪರವಾಗಿ ಬಂಟರ ಸಂಘದವರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿರುವುದಕ್ಕೆ ನನ್ನ ಸಹಮತವಿಲ್ಲ. ನಾನು ಎಲ್ಲಾ ಜಾತಿಯವರ, ಎಲ್ಲಾ ಧರ್ಮದವರ ಪ್ರತಿನಿಧಿ. ನಾನು ಯಾವತ್ತೂ ಜಾತಿ ಸಂಘಟನೆಯಲ್ಲಿ ತೊಡಗಿಸಿಕೊಂಡವನಲ್ಲ. ಯಾವ ಸಂಘಟನೆಯವರು ನನ್ನ ಪರವಾಗಿ ಲಾಬಿ ಮಾಡಬೇಕೆಂದು ನಾನು ಬಯಸುವುದಿಲ್ಲ" ಎಂದು ಹೇಳಿದರು.

"ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷವನ್ನು ಸಂಘಟಿಸಿದ್ದೇನೆ. ಪ್ರತಿ ಚುನಾವಣೆಯಲ್ಲಿಯೂ ನನ್ನ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚು ಮತಗಳು ದೊರೆಯುವಂತೆ ಶ್ರಮಿಸಿದ್ದೇನೆ. ಒಂದು ಅವಧಿಯಲ್ಲಿ ಪಕ್ಷೇತರನಾಗಿ ಶಾಸಕನಾಗಿದ್ದಾಗಲೂ ಬಿಜೆಪಿ ಸಂಘಟನೆಗಾಗಿ ದುಡಿದ್ದೇನೆ. ಪಕ್ಷೇತರನಾಗಿದ್ದ ಅವಧಿಯಲ್ಲೂ ವಿಧಾನ ಪರಿಷತ್ ಸದಸ್ಯರ ಆಯ್ಕೆ, ರಾಜ್ಯಸಭಾ ಸದಸ್ಯರ ಆಯ್ಕೆಯ ಸಂದರ್ಭದಲ್ಲಿ ಯಾವುದೇ ದುಡ್ಡು ಪಡೆಯದೆ ಬಿಜೆಪಿ ಅಭ್ಯರ್ಥಿಗಳಿಗೇ ಮತ ಹಾಕಿದ್ದೇನೆ. ಬೇರೆ ಪಕ್ಷಗಳಿಂದ ಆಫರ್ ಬಂದಾಗ ಪಕ್ಷಾಂತರ ಮಾಡಿಲ್ಲ. ಆಮಿಷ ಬಂದಾಗ ದುಡ್ಡು ತೆಗೊಂಡಿಲ್ಲ. ನನ್ನ ಈ ಅರ್ಹತೆಗಳು ಮಂತ್ರಿ ಮಾಡಲು ಸಾಕಾಗುವುದಿಲ್ಲವೇ? ನನಗೆ ಮಂತ್ರಿಯಾಗುವ ಯೋಗ ಭಾಗ್ಯ ಇಲ್ಲವೆ?" ಎಂದು ಅವರು ಪ್ರಶ್ನಿಸಿದರು.












Click it and Unblock the Notifications