DK Shivakumar: ಚುನಾವಣೆ ಮುನ್ನ ಡಿಸಿಎಂ ಟೆಂಪಲ್ ರನ್: ಧರ್ಮಸ್ಥಳ-ಕುಕ್ಕೆ ದೇಗುಲ ಭೇಟಿ
ಮಂಗಳೂರು, ಮಾರ್ಚ್ 27: ಲೋಕಸಭಾ ಚುನಾವಣೆ 2024 ಮೊದಲು ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟೆಂಪರ್ ರನ್ ಮಾಡಿದ್ದಾರೆ. ಮಂಗಳವಾರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಧರ್ಮಸ್ಥಳಕ್ಕೆ ಮತ್ತು ಕುಕ್ಕೆಗೆ ಭೇಟಿ ನೀಡಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.

ಧರ್ಮಸ್ಥಳದಲ್ಲಿ ದರ್ಶನದ ವೇಳೆ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಇದ್ದರು. ದರ್ಶನ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಸಿಎಂ, ಈ ಬಾರಿ 'ಧರ್ಮ ಯುದ್ಧ' ಆರಂಭಿಸುವ ಮೊದಲು ಧರ್ಮಸ್ಥಳ ಮಂಜುನಾಥ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದಿದ್ದೇನೆ ಎಂದು ಚುನಾವಣೆ ಎದುರಿಸುವ ಕುರಿತು ಅವರು ಮಾತನಾಡಿದರು.
ಚುನಾವಣೆ ಮೊದಲು ಮಂಜುನಾಥನ ದರ್ಶನ
ಲೋಸಕಭಾ ಚುನಾವಣೆ ಒಂದೇ ಅಲ್ಲ. ಪ್ರತಿ ಭಾರಿ ನಾನು ಚುನಾವಣೆ ಎದುರಿಸುವ ಸಂದರ್ಭದಲ್ಲಿ ಮೊದಲು ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಪಡೆಯುತ್ತೇನೆ. ಮಂಜುನಾಥ ದೇವರು ನನ್ನನ್ನು ಆಶೀರ್ವದಿಸುತ್ತಿದ್ದಾನೆ ಎಂದ ಅವರು ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಮತದಾನ ವೇಳೆ ಕಾಂಗ್ರೆಸ್ ನೆನಪಾಗುತ್ತದೆ
ನಮ್ಮ ಸರ್ಕಾರ ಜನರಿಗೆ ಭರವಸೆ ನೀಡಿದ್ದ ಎಲ್ಲ ಐದು ಗ್ಯಾರೆಂಟಿ ಭರವಸೆಗಳನ್ನು ಈಡೇರಿಸಿದೆ. ವಿಧಾನಸಭಾ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ನಾವು ನಡೆದಿಕೊಂಡಿದ್ದೇವೆ. ಇದೀಗ ನಮ್ಮ ಕೈಗಳನ್ನು ಮತ್ತಷ್ಟು ಬಲಪಡಿಸಲು ಮತದಾರರ ಮುಂದೆ ಹೋಗುತ್ತಿದ್ದೇವೆ. ಹೇಳಿದಂತೆ ಕೆಲಸ ಮಾಡಿ ತೋರಿಸಿದ್ದೇವೆ. ಮುಂದಿನದ್ದು ಮತದಾರರು ನೀರ್ಣಯಿಸುತ್ತಾರೆ ಎಂದರು.
ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಧರ್ಮಸ್ಥಳದಂತಹ ಅನೇಕ ಯಾತ್ರಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರು ಮತದಾನ ಮಾಡುವಾಗ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಲೋಕಸಭೆ ಚುನಾವಣೆ ತಯಾರಿ ಕುರಿತು ಮಾತನಾಡಿದರು.
ಗ್ಯಾರೆಂಟಿಗಳ ಬಗ್ಗೆ ವಿಶ್ವಾಸವಿದೆ: ಡಿಕೆಶಿ
ಕಾಂಗ್ರೆಸ್ ಪಕ್ಷಕ್ಕೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ಹೆಚ್ಚು ವಿಶ್ವಾಸವಿದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಅವರು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ನಂತರ ಹೇಳಿದರು. ಇಲ್ಲಿ ಈ ಭಾಗದಲ್ಲಿ ಶಂಕಿತ ನಕ್ಸಲರ ಚಲನವಲ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನಾವು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳ ಬಳಿಯು ಮಾತನಾಡುತ್ತೇನೆ ಎಂದು ಭರವಸೆ ಕೊಟ್ಟರು.
ರಾಜ್ಯದ ನಾಲ್ಕು ಕ್ಷೇತ್ರ ಹೊರತುಪಡಿಸಿದರೆ ಕಾಂಗ್ರೆಸ್ ಬಹುತೇಕ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಇತ್ತ ಒಂದೊಂದೇ ಕ್ಷೇತ್ರ ಪ್ರಚಾರ ಕಾರ್ಯ ಆರಂಭವಾಗಿದೆ. ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಫುಲ್ ಆಕ್ಟಿವ್ ಆಗಿ ಡಿಕೆ ಶಿವಕುಮಾರ್ ಕಾರ್ಯ ನಿರ್ವಹಿಸಿದ್ದರು. ಈ ಬಾರಿಯ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಮೊದಲು ಅವರು ಟೆಂಪಲ್ ರನ್ ಮಾಡಿದ್ದಾರೆ.












Click it and Unblock the Notifications