ಪುತ್ತೂರು: ಹಿಂದೂ ಮುಖಂಡ ಅವಿನಾಶ್ ಗಡಿಪಾರಿಗೆ ನೋಟಿಸ್, ಕಾರಣವೇನು?
ಮಂಗಳೂರು, ಜನವರಿ 23: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿಂದೂ ಮುಖಂಡ ಅವಿನಾಶ್ ಪುರುಷರಕಟ್ಟೆ ಗಡಿಪಾರಿಗೆ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದೆ.
ಅವಿನಾಶ್ ಪುರುಷರಕಟ್ಟೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿಯಾಗಿದ್ದು, ನಾಳೆ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಒಂದು ವೇಳೆ ನಾಳೆ ಅವಿನಾಶ್ ಪುರುಷರಕಟ್ಟೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಿಂದ ಬೀದರ್ಗೆ ಗಡಿಪಾರು ಮಾಡುವುದಾಗಿ ನೋಟಿಸ್ನಲ್ಲಿ ತಿಳಿಸಲಾಗಿದ್ದು, ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಹಾಜರಾಗುವಂತೆ ತಿಳಿಸಲಾಗಿದೆ.

ಪೊಲೀಸ್ ನೋಟಿಸ್ನಲ್ಲಿರುವುದೇನು?
ಅವಿನಾಶ್ ಎಂ ಪುರುಷರಕಟ್ಟೆ ಮನೆ, ಇಂದಿರನಗರ, ನರಿಮೊಗರು ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು ಎಂಬಾತನನ್ನು ಕಾನೂನು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಿಂದ ಬೀದರ್ ಜಿಲ್ಲಾ ವ್ಯಾಪ್ತಿಯ ಸಾಂತಪುರ ಪೊಲೀಸ್ ಠಾಣಾ ಸರಹದ್ದಿಗೆ ಕರ್ನಾಟಕ ಪೊಲೀಸ್ ಅಧಿನಿಯಮ ಕರ್ನಾಟಕ ಪೊಲೀಸ್ ಕಾಯ್ದೆ- 1963 ಕಲಂ 55(ಎ) ಮತ್ತು (ಬಿ) ರಂತೆ ಗಡಿಪಾರುಗೆ ಆದೇಶ ಮಾಡುವ ಕುರಿತು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ನ್ಯಾಯಾಲಯದಲ್ಲಿ ದಿನಾಂಕ: 24/01/2024 ಪೂರ್ವಾಹ್ನ :11.00 ಘಂಟೆಗೆ ವಿಚಾರಣೆಗೆ ನಿಗದಿಪಡಿಸಲಾಗಿದೆ.
ಈ ಪ್ರಕರಣದಲ್ಲಿ ನೀವು ಸ್ವತಃ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದೆಂದು ಈ ಮೂಲಕ ನಿಮಗೆ ತಿಳಿಸಲಾಗಿದೆ. ತಪ್ಪಿದಲ್ಲಿ ಸದರಿ ಪ್ರಕರಣನದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಭಾವಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷಿಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವಿನಾಶ್ ಪುರುಷರಕಟ್ಟೆಗೆ ಪೊಲೀಸ್ ನೋಟಿಸ್ ನೀಡಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಎಂದು ಉಲ್ಲೇಖ ಮಾಡಲಾಗಿದೆ.












Click it and Unblock the Notifications