ಕರ್ನಾಟಕ-ಕೇರಳ ನಡುವೆ ನೂತನ ರೈಲು ಮಾರ್ಗ, ಅಪ್‌ಡೇಟ್

ಮಂಗಳೂರು, ಮಾರ್ಚ್‌ 27: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಮತ್ತು ಕೇರಳದ ಕಾಂಞಂಗಾಡು ನಡುವಿನ ರೈಲು ಮಾರ್ಗದ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿದೆ. ಉಡುಪಿ ಅಷ್ಟಮಠಗಳಲ್ಲಿ ಕಾಣಿಯೂರು ಮಠದ ಮೂಲ ಮಠ ಕಾಣಿಯೂರಿನಲ್ಲಿದೆ. ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣ ಮಾಡುವಾಗ ಇಲ್ಲಿ ಬ್ರೇಕ್ ಹಾಲ್ಟ್ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. ಆದರೆ ಇಂದಿಗೂ ಸಹ ಇದು ಹಾಗೆಯೇ ಮುಂದುವರೆದಿದೆ.

ಸುಮಾರು 91 ಕಿ. ಮೀ. ಉದ್ದದ ಕಾಣಿಯೂರು-ಕಾಂಞಂಗಾಡು ನೂತನ ರೈಲು ಮಾರ್ಗ ನಿರ್ಮಾಣದ ಕುರಿತು ಕೇರಳದ ನಿಯೋಗ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ಮಾಡಿದೆ. ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರದ ಪಾಲಿನ ಅನುದಾನ ಹಂಚಿಕೆ ಕುರಿತು ಮಾತುಕತೆ ನಡೆಸಬೇಕು ಎಂದು ನಿಯೋಗ ಮನವಿ ಮಾಡಿದೆ.

kaniyur-railway-line

ಕೇರಳದ ನಿಯೋಗದ ಜೊತೆ ಶಾಸಕ ಅಶೋಕ್ ಕುಮಾರ್ ರೈ ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಕಾಣಿಯೂರು-ಕಾಂಞಂಗಾಡು ನೂತನ ರೈಲು ಮಾರ್ಗದ ಕುರಿತು ಚರ್ಚೆಯನ್ನು ನಡೆಸಲಿದ್ದಾರೆ. ಈ ಮೂಲಕ ಹೊಸ ರೈಲು ಮಾರ್ಗದ ಬೇಡಿಕೆಗೆ ಮರು ಜೀವ ಬಂದಿದೆ.

ಹೊಸ ರೈಲು ಮಾರ್ಗ ಏಕೆ ಬೇಕು?; ಕಾಣಿಯೂರು-ಕಾಂಞಂಗಾಡು ನೂತನ ರೈಲು ಮಾರ್ಗದ ಪ್ರಸ್ತಾವನೆ ದಶಕಗಳಷ್ಟು ಹಿಂದಿನದು. ವಾಣಿಜ್ಯ, ಪ್ರವಾಸೋದ್ಯಮದ ಕಾರಣಕ್ಕೆ ಈ ರೈಲು ಮಾರ್ಗ ಬಹುಮುಖ್ಯವಾಗಿದೆ ಎಂದು ಅಂದಾಜಿಸಲಾಗಿದೆ. ನೂತನ ರೈಲು ಮಾರ್ಗ ಯೋಜನೆಯ ಪ್ರಾಥಮಿಕ ಸಮೀಕ್ಷೆ 2015ರಲ್ಲಿ ಪೂರ್ಣವಾಗಿದೆ.

ಪ್ರಾಥಮಿಕ ವರದಿಯ ಬಳಿಕ ಕೇಂದ್ರ ಸರ್ಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೆಚ್ಚ ಹಂಚಿಕೆ ಅಡಿ ಯೋಜನೆಯನ್ನು ಕೈಗೊಳ್ಳಬಹುದು ಎಂದು ಹೇಳಿತ್ತು. ಕೇರಳ ಸರ್ಕಾರ ಈ ನೂತನ ರೈಲು ಮಾರ್ಗ ಯೋಜನೆಯ ಪ್ರಾಥಮಿಕ ಕೆಲಸಗಳಿಗೆ 2016ರ ಬಜೆಟ್‌ನಲ್ಲಿ ಅನುದಾನವನ್ನು ಘೋಷಣೆ ಮಾಡಿತ್ತು. ಆದರೆ ಬಳಿಕ ಯೋಜನೆ ಕಾರ್ಯಗತವಾಗಿಲ್ಲ.

ಕಾಣಿಯೂರು-ಕಾಂಞಂಗಾಡು ನೂತನ ರೈಲು ಮಾರ್ಗ ರಚನೆಯಾದರೆ ಕಾಣಿಯೂರು ಹೊಸ ರೈಲು ಜಂಕ್ಷನ್ ಆಗಲಿದೆ. ಮಂಗಳೂರು-ಹಾಸನ ರೈಲು ಮಾರ್ಗ, ಕಾಂಞಂಗಾಡು-ಕಾಣಿಯೂರು ರೈಲುಗಳು ಇಲ್ಲಿಗೆ ಆಗಮಿಸಲಿವೆ. ಹೊಸ ರೈಲು ಯೋಜನೆಗಾಗಿ ಇಲಾಖೆ ಈಗಾಗಲೇ ಏಲಡ್ಕದಲ್ಲಿ ಜಮೀನು ಗುರುತು ಮಾಡಿದೆ. ಎಲ್ಲವೂ ಅಂದುಕೊಂಡತೆ ನಡೆದು ಯೋಜನೆಗೆ ಒಪ್ಪಿಗೆ ಸಿಕ್ಕಿದರೆ ಕಾಣಿಯೂರು ರೈಲು ನಿಲ್ದಾಣ ಈಗಿರುವ ಸ್ಥಳದಿಂದ 2 ಕಿ. ಮೀ. ಮುಂದಕ್ಕೆ ಹೋಗಲಿದೆ.

ಈ ಹಿಂದೆ ಪ್ರಮುಖ ರೈಲುಗಳು ಕಾಣಿಯೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳ್ಳುತ್ತಿದ್ದವು. ಆದರೆ ಗೇಜ್ ಪರಿವರ್ತನೆ ಬಳಿಕ ಮಂಗಳೂರು-ಸುಬ್ರಮಣ್ಯ ರೋಡ್ ರೈಲು ಮಾತ್ರ ನಿಲುಗಡೆಗೊಳ್ಳುತ್ತಿದೆ. ಇಲ್ಲಿ ರೈಲಿಗೆ ಪ್ರಯಾಣಿಕರ ಸಂಖ್ಯೆ ಇದ್ದು, ರೈಲು ನಿಲ್ದಾಣ ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ.

ಕಮೀಷನ್ ಏಜೆಂಟ್ ಮಾದರಿಯಲ್ಲಿ ಕಾಣಿಯೂರು ರೈಲು ನಿಲ್ದಾಣ ಕಾರ್ಯ ನಿರ್ವಹಣೆ ಮಾಡುತ್ತಿದೆ. ಪ್ರತಿ 5 ವರ್ಷಗಳಿಗೊಮ್ಮೆ ಏಜೆಂಟ್ ಬದಲಾಗುತ್ತಾರೆ. ಕಾಣಿಯೂರು-ಕಾಂಞಂಗಾಡು ರೈಲು ಯೋಜನೆಗೆ ಕೇರಳ ಸರ್ಕಾರದ ಕಡೆಯಿಂದ ಹೆಚ್ಚಿನ ಬೇಡಿಕೆ ಇದೆ. ಕಾಸರಗೋಡಿನಿಂದ ಹಾಸನ, ಬೆಂಗಳೂರು ಸಂಪರ್ಕಿಸಲು ಇದು ಪ್ರಮುಖ ಮತ್ತು ಹತ್ತಿರದ ನಿಲ್ದಾಣ.

ಈ ರೈಲು ಮಾರ್ಗ ರಚನೆಗೊಂಡರೆ ಸುಳ್ಯ ಮೂಲಕ ರೈಲು ಮಾರ್ಗ ಸಾಗುತ್ತದೆ. ಡಿ. ವಿ. ಸದಾನಂದ ಗೌಡರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಕಾಣಿಯೂರು-ಕಾಂಞಂಗಾಡು ರೈಲು ಯೋಜನೆಗೆ ಸಮೀಕ್ಷೆ ಮಾಡಲು ಅನುದಾನ ಮಂಜೂರು ಮಾಡಿದ್ದರು. ಆದರೆ ಮುಂದೆ ಯೋಜನೆ ಕಾಗದದಲ್ಲಿ ಮಾತ್ರ ಉಳಿಯಿತು.

ಕಾಣಿಯೂರು-ಕಾಂಞಂಗಾಡು ಹೊಸ ರೈಲು ಮಾರ್ಗದ ಮೂಲಕ ಕಾಂಞಂಗಾಡು, ಮೀತ್, ಕೊಟ್ಟೋಡಿ, ಬಳಾಂತೋಡು, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಬೆಳ್ಳಾರೆ ಮತ್ತು ಸುಳ್ಯ ಮೂಲಕ ಕಾಣಿಯೂರಿಗೆ ತಲುಪಿ ಬೆಂಗಳೂರು-ಮಂಗಳೂರು ರೈಲ್ವೆ ಹಳಿಗೆ ಸಂಪರ್ಕ ಸಾಧಿಸಬಹುದು ಎಂಬುದು ಪ್ರಾಥಮಿಕ ಸಮೀಕ್ಷೆಯ ಲೆಕ್ಕಾಚಾರವಾಗಿದೆ.

2008-09ರಲ್ಲಿ ಮೊದಲ ಬಾರಿಗೆ ಈ ಯೋಜನೆಯ ಕುರಿತು ಸಮೀಕ್ಷೆ ನಡೆದಿತ್ತು. ಆಗ ಕಾಂಞಂಗಾಡು-ಪಣತ್ತೂರು ತನಕ ಸುಮಾರು 41 ಕಿ. ಮೀ. ಹಳಿಯ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. 2010-11ರ ಬಜೆಟ್‌ನಲ್ಲಿ ಪಾಣತ್ತೂರು-ಕಾಣಿಯೂರು ನಡುವಿನ ಸುಮಾರು 50 ಕಿ. ಮೀ. ತನಕ ಸಮೀಕ್ಷೆಗೆ ಅನುದಾನ ನೀಡಲಾಯಿತು. ಆದರೆ ಸಮೀಕ್ಷೆ ನಡೆಯಲಿಲ್ಲ.

ಕರ್ನಾಟಕ ಮತ್ತು ಕೇರಳ ಸಂಪರ್ಕಿಸುವ ಈ ರೈಲು ಯೋಜನೆಗೆ ಕೇರಳ ಭಾಗದಲ್ಲಿ ಸಮೀಕ್ಷೆಗಳು ನಡೆದಿವೆ. ಆದರೆ ಕರ್ನಾಟಕ ಭಾಗದ ಸಮೀಕ್ಷೆಗಳು ಬಾಕಿ ಇದೆ. ಟ್ರಾಫಿಕ್ ಮತ್ತು ಇಂಜಿನಿಯರಿಂಗ್ ಎಂಬ ಎರಡು ಹಂತದ ಸಮೀಕ್ಷೆಗಳು ನಡೆಯಬೇಕಿದೆ. ಮಾಹಿತಿಗಳ ಪ್ರಕಾರ ಈ ಯೋಜನೆಗೆ 1350 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 650 ಕೋಟಿ ರೂ. ಅನುದಾನವನ್ನು ಕೇರಳ ಮತ್ತು ಕರ್ನಾಟಕ ರಾಜ್ಯಗಳು 50:50ರ ವೆಚ್ಚ ಹಂಚಿಕೆಯಲ್ಲಿ ನೀಡಬೇಕಿದೆ.

ಈ ಸಮೀಕ್ಷೆ ನಡೆದರೆ ಕಾಣಿಯೂರು ಜಂಕ್ಷನ್ ನಿರ್ಮಾಣ, ಹಳಿ ನಿರ್ಮಾಣ ಮಾಡಿದರೆ ಆಗಮಿಸುವ ಪ್ರಯಾಣಿಕರ ಸಂಖ್ಯೆ, ಸರಕು ಸಾಗಣೆಗೆ ರೈಲು ಹೇಗೆ ಸಹಾಯಕವಾಗಲಿದೆ ಎನ್ನುವುದು ಸೇರಿದಂತೆ ವಿವಿಧ ಅಧ್ಯಯನ ಕೈಗೊಳ್ಳಲಾಗುತ್ತದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳ ಸಂಪರ್ಕಿಸುವ 2ನೇ ರೈಲು ಯೋಜನೆ ಇದಾಗಿದ್ದು, ಯೋಜನೆ ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಕೇರಳ ಸರ್ಕಾರ ಈ ಯೋಜನೆಗೆ ಈಗಾಗಲೇ 326 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ. ಆದರೆ ಕರ್ನಾಟಕ ರಾಜ್ಯದ ಪಾಲಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

2015ರಲ್ಲಿ ಯೋಜನೆಗೆ ಪ್ರಾಥಮಿಕ ಸಮೀಕ್ಷೆ ನಡೆಸಿದರೂ ಕೂಡಾ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಿಲ್ಲ. ಕೇರಳ, ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳು ವೆಚ್ಚ ಹಂಚಿಕೆಯಡಿ ಯೋಜನೆ ಕೈಗೊಂಡರೆ ಕರ್ನಾಟಕ-ಕೇರಳ ನಡುವೆ ಮತ್ತೊಂದು ರೈಲು ಮಾರ್ಗ ನಿರ್ಮಾಣವಾಗಲಿದೆ.

ಶಾಸಕ ಅಶೋಕ್ ರೈ ಮಾತನಾಡಿ, "ಸುಬ್ರಮಣ್ಯ ಮತ್ತು ಬೆಂಗಳೂರು ನಗರಕ್ಕೆ ತೆರಳುವ ಪ್ರಯಾಣಿಕರಿಗೆ ಈ ರೈಲು ಯೋಜನೆ ಸಹಾಯಕವಾಗಿದೆ. ಈ ವಿಚಾರದಲ್ಲಿ ಕೇರಳದ ನಿಯೋಗ ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಮುಂದಿನ ವಾರ ಬೆಂಗಳೂರಿನಲ್ಲಿ ಈ ಕುರಿತು ಚರ್ಚೆ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+