ಕರಾವಳಿಯಲ್ಲಿ ಸರಣಿ ಹತ್ಯೆ: ಜಿಲ್ಲಾಡಳಿತದ ಶಾಂತಿ ಸಭೆಗೆ ಮುಖಂಡರು ಗೈರು
ಮಂಗಳೂರು, ಜುಲೈ, 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರ ಬೆನ್ನಲ್ಲೇ ಶನಿವಾರ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಲಾಗಿದ್ದು, ಅದು ಕಾಟಾಚಾರಕ್ಕೆ ಎನ್ನುವಂತೆ ಕಂಡು ಬಂದಿದೆ. ಏಕೆಂದರೆ ಶನಿವಾರದ ಸಭೆಯಲ್ಲಿ ಮುಖ್ಯವಾಗಿ ಹಿಂದೂ, ಮುಸ್ಲಿಂ ಸಂಘಟನೆಗಳ ಯಾವೊಬ್ಬ ಮುಖಂಡರು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಹಾಜರ್ ಆಗಿರಲಿಲ್ಲ.
ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ಸರಣಿ ಹತ್ಯೆಗಳಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಇಂದು ಜಿಲ್ಲೆಯ ಪ್ರಮುಖ ಸಂಘಟನೆಗಳು, ಪೊಲೀಸ್ ಅಧಿಕಾರಿಗಳು, ವಿವಿಧ ಧರ್ಮಗಳು, ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಭೆ ಕರೆದಿತ್ತು. ಆದರೆ ಸಂಘಟನೆಗಳ ಮುಖಂಡರು ಸಭೆಯಿಂದ ದೂರ ಉಳಿದಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಸದರು, ಶಾಸಕರು ಸಭೆಗೆ ಗೈರು ಆಗಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಎಜಿಡಿಪಿ ಅಲೋಕ್ ಕುಮಾರ್ ಮುಂದಿನ ದಿನಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರವಾಗಿ ಶಾಂತಿಸಭೆಯನ್ನು ನಡೆಸಲಾಗುತ್ತದೆ. ಬೀಟ್ ಕಮಿಟಿ, ಮೊಹಲ್ಲಾ ಸಮಿತಿ, ಯುವ ಸಮಿತಿ ರಚಿಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತದೆ ಎಂದು ಹೇಳಿದರು.

ಶಾಂತಿ ಸಭೆಯಲ್ಲಿ ಹಲವರಿಂದ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದೆ. ಪ್ರಚೋದನಕಾರಿ ಭಾಷಣ ಮಾಡುವವರನ್ನು ಕಾನೂನಿನ ಅಡಿ ಪ್ರಕರಣ ದಾಖಲಿಸಬೇಕು. ಗಾಂಜಾ, ಜೂಜು, ಪಬ್ ಹಾಗೂ ಹುಕ್ಕಾ ಬಾರ್‌ಗಳ ಚಟುವಟಿಕೆಗಳನ್ನು ನಿಯಂತ್ರಣ ಮಾಡಬೇಕು. ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸುವುದು, ಸುದ್ದಿಗಳ ವೈಭವೀಕರಣ ಮಾಡುವುದನ್ನು ನಿಯಂತ್ರಣ ಮಾಡಬೇಕು ಎನ್ನುವ ಸಲಹೆಗಳನ್ನು ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಇಬ್ಬರು ಡಿಸಿಪಿಗಳು, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಜೆ.ಆರ್.ಲೋಬೊ, ಮಿಥುನ್ ರೈ ಸೇರಿದಂತೆ ಕಾಂಗ್ರೆಸ್ ಪ್ರಮುಖರು, ಜೆಡಿಎಸ್ ಜಿಲ್ಲಾ ಯುವ ಅಧ್ಯಕ್ಷ ಅಕ್ಷಿತ್ ಸುವರ್ಣ ಸೇರಿದಂತೆ ಸರಕಾರಿ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾತ್ರ ಉಪಸ್ಥಿತರಿದ್ದರು.












Click it and Unblock the Notifications