ಕರ್ಫ್ಯೂ ತೆಗೆಯಿರಿ ಎಂದವನಿಗೆ ದಕ್ಷಿಣ ಕನ್ನಡ ಡಿಸಿ ಕೊಟ್ಟ ಉತ್ತರವೇನು? ಆಡಿಯೋ ವೈರಲ್
ಮಂಗಳೂರು, ಸೆಪ್ಟೆಂಬರ್ 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರರವರಿಗೆ ಕರೆ ಮಾಡಿದ ವರ್ತಕರ ಸಂಘದ ಅಧ್ಯಕ್ಷನಿಗೆ ಜಿಲ್ಲಾಧಿಕಾರಿ ಗಾದೆ ಮಾತು ಹೇಳುವ ಮೂಲಕ ಪರಿಸ್ಥಿತಿಯನ್ನು ಅರ್ಥ ಮಾಡಿಸಿದ ಆಡಿಯೋ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಇದರ ನಡುವೆ ಜಿಲ್ಲೆಯಲ್ಲಿ ಹೇರಲಾಗಿರುವ ವಾರಾಂತ್ಯದ ಕರ್ಫ್ಯೂವನ್ನು ತೆಗೆಯಬೇಕೆಂದು ಒತ್ತಾಯಗಳು ಜಾಸ್ತಿಯಾಗಿದೆ. ವರ್ತಕರ ಆದಿಯಾಗಿ ಜಿಲ್ಲೆಯ ಜನಪ್ರತಿನಿಧಿಗಳೂ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ವಾರಾಂತ್ಯದ ಕರ್ಫ್ಯೂವನ್ನು ತೆಗೆಯಬೇಕೆಂದು ಒತ್ತಡ ಹೇರುತ್ತಿದೆ.
ಇದರ ನಡುವೆ ರೆಡಿಮೇಡ್ ಬಟ್ಟೆ, ಚಪ್ಪಲಿ, ಫ್ಯಾನ್ಸಿ ಮಾರಾಟಗಾರರ ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರಿಗೆ ಕರೆ ಮಾಡಿ ವಾರಾಂತ್ಯದ ಕರ್ಫ್ಯೂ ತೆಗೆಯುವಂತೆ ಮನವಿ ಮಾಡಿದ್ದಾರೆ. ಸಂತೋಷ್ ಹಾಗೂ ಡಿಸಿ ಜೊತೆ ಮಾತನಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಕರೆಯಲ್ಲಿ ಜಿಲ್ಲಾಧಿಕಾರಿ ಪರಿಸ್ಥಿತಿ ಅರ್ಥ ಮಾಡಿಸಿದ ರೀತಿ ವೈರಲ್ ಆಗಿದೆ.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರಿಗೆ ಕರೆ ಮಾಡಿದ ಸಂತೋಷ್ ಕಾಮತ್, ವಾರಾಂತ್ಯದ ಕರ್ಫ್ಯೂನಿಂದ ವ್ಯಾಪಾರಿಗಳಿಗೆ ಬಹಳ ತೊಂದರೆಯಾಗುತ್ತಿದ್ದು, ದಯವಿಟ್ಟು ಕರ್ಫ್ಯೂ ತೆಗೆಯಬೇಕೆಂದು ಮನವಿ ಮಾಡಿದ್ದಾರೆ. ಈ ವೇಳೆ ಸಮಾಧಾನದಿಂದ ಉತ್ತರಿಸಿದ ಜಿಲ್ಲಾಧಿಕಾರಿ, ಗಾದೆ ಮಾತು ಮೂಲಕ ಪರಿಸ್ಥಿತಿಯನ್ನು ಅರ್ಥ ಮಾಡಿಸಿದ್ದಾರೆ.
ಫೋನ್ ಕರೆಯಲ್ಲಿ ಸಂತೋಷ್ ಕಾಮತ್‌ಗೆ ಉತ್ತರಿಸಿದ ಜಿಲ್ಲಾಧಿಕಾರಿ, "ಕಳೆದ ಇಷ್ಟೂ ದಿನಗಳ ನಿಮ್ಮ(ವರ್ತಕರ) ಸಹಕಾರದಿಂದ ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ಬಂದಿದೆ. ಕಾಸರಗೋಡು ಹತ್ತಿರವಿದ್ದರೂ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.2 ರಷ್ಟಿದೆ. ಮುಂದಿನ ವಾರದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಬರಲಿದೆ. ಆಗ ಸರ್ಕಾರದ ಮುಂದೆ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಸಿ ವಾರಾಂತ್ಯದ ಕರ್ಫ್ಯೂ ತೆಗೆಯಲು ಮನವರಿಕೆ ಮಾಡಬಹುದು."
"ಈ ದಿನದವರೆಗೆ ಸಹಕಾರ ನೀಡಿದ ನೀವು, ಈಗ ನಿಯಮ ವಿರುದ್ಧವಾಗಿ ನಡೆದುಕೊಂಡರೆ, ಕೊರೊನಾ ವಿರುದ್ಧ ನಾವು ಸೋತ ಹಾಗೆ ಆಗುತ್ತದೆ. ಕೊನೆ ಕ್ಷಣದಲ್ಲಿ ಹೋರಾಟ ಕೈ ಬಿಟ್ಟ ರೀತಿ ಆಗುತ್ತದೆ. 'ಪಾಯಸ ಆಗುವವರೆಗೆ ಕಾದು, ಪಾಯಸ ಆದ ಕೂಡಲೇ ಬಿಸಿಬಿಸಿ ಪಾಯಸವನ್ನು ಹಾಕಿ ಬಾಯಿ ಸುಟ್ಟುಕೊಂಡಂತೆ' ಎಂಬ ಪರಿಸ್ಥಿತಿ ಆಗಬಹುದು. ಪಾಯಸ ಆರುವವರೆಗೆ ಕಾಯಬೇಕು."
"ಇಡೀ ಸರ್ಕಾರವೇ ನೇರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. ನಾನೇ ನಿರ್ಧಾರ ಮಾಡುವ ಹಾಗೆಯೇ ಇದ್ದರೆ ಈ ಕ್ಷಣದಲ್ಲೇ ವಾರಾಂತ್ಯದ ಕರ್ಫ್ಯೂ ತೆಗೆಯುತ್ತಿದ್ದೆ. ಇನ್ನು ಒಂದು ವಾರ ಕಾದರೆ, ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಲಿದೆ. ಅಷ್ಟಾಗಿಯೂ ನೀವು ಅಂಗಡಿಯನ್ನು ತೆರೆದೇ ತೆರೆಯುತ್ತೀವಿ ಅಂತಾ ಹೇಳಿದೆ, ನಾನು ನನ್ನ ವ್ಯಾಪ್ತಿಯಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ."
"ಈ ಎಫ್ಐಆರ್, ಕೇಸ್, ಟ್ರೇಡ್ ಲೈಸೆನ್ಸ್ ಕ್ಯಾನ್ಸಲ್ ಮಾಡುವುದು ನನಗೂ ಬೇಕಾಗಿಲ್ಲ. ಇದರಿಂದ ನನ್ನ ಸಂಬಳವೇನೂ ಜಾಸ್ತಿ ಆಗಲ್ಲ. ಆದರೆ ನೀವು ಕಾನೂನು ಉಲ್ಲಂಘನೆ ಮಾಡಿದರೆ ನಾನೂ ಕೇಸ್ ಮಾಡಲು ಹಿಂಜರಿಯುದಿಲ್ಲ," ಅಂತಾ ಸಿಹಿ ಮಾತಿನಲ್ಲೇ ಜಿಲ್ಲಾಧಿಕಾರಿ ರಾಜೇಂದ್ರ. ಕೆ. ವಿ. ಎಚ್ಚರಿಕೆ ನೀಡಿದ್ದಾರೆ.
ಸುಮಾರು ಐದು ನಿಮಿಷಗಳ ಕಾಲ ಈ ಮಾತುಕತೆ ನಡೆದಿದ್ದು, ಜಿಲ್ಲಾಧಿಕಾರಿ ಜನ ಸಾಮಾನ್ಯನ ಜೊತೆ ಮಾತನಾಡಿದ ರೀತಿ, ತಾಳ್ಮೆ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಸಿದ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಯಕ್ಷಮತೆ ಮತ್ತು ಸ್ಪಂದನೆಯಿಂದಲೇ ಜಿಲ್ಲೆಯಲ್ಲಿ ಹೆಸರುವಾಸಿಯಾದ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ. ವಿ.ಯವರ ನಡವಳಿಕೆ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications