ಆರೆಸ್ಸೆಸ್ ಕಾರ್ಯಕರ್ತನ ಸಾವು: ಬಿ ಸಿ ರೋಡಿನಲ್ಲಿ ಸ್ಮಶಾನ ಮೌನ
ಮಂಗಳೂರು, ಜುಲೈ 8: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಸಾವು ಮಂಗಳೂರಿನಾದ್ಯಂತ ಸ್ಮಶಾನ ಮೌನವನ್ನುಂಟುಮಾಡಿದೆ.
ಶರತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಮಂಗಳೂರಿನ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿರುವ ಸಂಘಪರಿವಾರದ ನೂರಾರು ಕಾರ್ಯಕರ್ತರು ಹಾಗೂ ನಾಯಕರು ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಬಂಟ್ವಾಳದ ಶರತ್ ರ ನಿವಾಸಕ್ಕೆ ಶವಯಾತ್ರೆ ಹೊರಟಿದೆ. ಎ.ಜೆ. ಆಸ್ಪತ್ರೆಯ ಶವಾಗಾರದ ಸುತ್ತ ಬಿಗಿಭದ್ರತೆ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ಸಿಆರ್ ಪಿಎಫ್ ನಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿ.ಸಿ.ರೋಡ್ ಹಾಗೂ ಫರಂಗಿಪೇಟೆಯಲ್ಲಿ ಪೊಲೀಸರು ಅಂಗಡಿಗಳನ್ನು ಮುಚ್ಚಿದ್ದಾರೆ.
ಕಪ್ಪು ಪಟ್ಟಿಯನ್ನು ಕೈಗೆ ಕಟ್ಟಿ ಮಂಗಳೂರಿನ ಆಸ್ಪತ್ರೆಯ ಮುಂಭಾಗ ಜಮಾಯಿಸಿದ ಸಾವಿರಾರು ಸಂಘಪರಿವಾರದ ಕಾರ್ಯಕರ್ತರು ಮೌನವಾಗಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೂಕ್ಷ್ಮ ಪ್ರದೇಶ ಹಾಗೂ ಪಡೀಲ್, ಕಣ್ಣೂರು, ಬಂಟ್ವಾಳ ಮಾಸಾದಿಗಳ ಬಳಿ ಬಿಗಿ ಬಂದೋಬಸ್ ಏರ್ಪಡಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಇಡೀ ಬಿ ಸಿ ರೋಡು ಶೋಕ ಸಾಗರದಲ್ಲಿ ಮುಳುಗಿದೆ.

ಜುಲೈ 4ರಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಚಿಕಿತ್ಸೆ ಫಲಿಸದೆ ನಿನ್ನೆ(ಜು.7) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮಂಗಳೂರಿನ ಬಿ.ಸಿ ರೋಡಿನಲ್ಲಿ ಈ ಘಟನೆ ನಡೆದಿತ್ತು.












Click it and Unblock the Notifications