ಕೋಣ ತಿವಿದು ಕೂಲಿ ಕಾರ್ಮಿಕ ಸಾವು, ಮಾಲೀಕರ ನಿರ್ಲಕ್ಷ್ಯ ಆರೋಪ
ಕೂಲಿ ಕಾರ್ಮಿಕರೊಬ್ಬರನ್ನು ಕೋಣವೊಂದು ತಿವಿದು ಕೊಂದ ಘಟನೆ ಮಂಜೊಟ್ಟಿ ಸಮೀಪ ಪೆರ್ಮಾನು ಬಸದಿ ರಸ್ತೆಯಲ್ಲಿ ಸಂಭವಿಸಿದೆ. ಆದರೆ ಈ ಸಾವಿಗೆ ಜಮೀನು ಮಾಲೀಕರ ನಿರ್ಲಕ್ಷ್ಯ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ
ಮಂಗಳೂರು, ಮಾರ್ಚ್ 26: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೋಣವೊಂದು ತಿವಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ನಡ ಗ್ರಾಮದ ಮಂಜೊಟ್ಟಿ ಸಮೀಪ ಪೆರ್ಮಾನು ಬಸದಿ ರಸ್ತೆಯಲ್ಲಿ ಸಂಭವಿಸಿದೆ.
ಬೆಳ್ತಂಗಡಿ ನಗರ ವ್ಯಾಪ್ತಿಯ ಡೊಂಬಯ್ಯ ಪೂಜಾರಿ (53) ಮೃತರು. ಕೂಲಿ ಕೆಲಸಕ್ಕೆಂದು ಅನಿಲ್ ಮಾಲೀಕತ್ವದ ತೋಟಕ್ಕೆ ಹೋಗುತ್ತಿದ್ದರು. ಶನಿವಾರ ಸಂಜೆ ಹುಲ್ಲು ತೆಗೆದುಯುತ್ತಿದ್ದ ವೇಳೆ ಹಿಂದಿನಿಂದ ಬಂದ ಕೋಣವೊಂದು ತಿವಿದಿದ್ದು, ಕೊಂಬು ಎದೆಯನ್ನು ಸೀಳಿದೆ.[ಮೇವುಣಿಸಿದವರ ದನಿ ಕೇಳಿ ಓಡೋಡಿ ಬಂದ ಕಡವೆ 'ರಾಜು'!]

ಆ ತಕ್ಷಣವೇ ಸ್ಥಳೀಯರ ಸಹಕಾರದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕೆಲಸ ಮಾಡುತ್ತಿದ್ದ ಮನೆ ಮಾಲೀಕ ಒಂಟಿ ಕೋಣವನ್ನು ಸಾಕುತ್ತಿದ್ದು, ಇದನ್ನು ಹಗ್ಗವೊಂದರಿಂದ ಕಟ್ಟಿ ಹಾಕಿದ್ದರು. ಆದರೆ ಹಗ್ಗವನ್ನು ತುಂಡರಿಸಿ ಡೊಂಬಯ್ಯ ಪೂಜಾರಿ ಮೇಲೆ ದಾಳಿ ನಡೆಸಿದೆ.
ಆದರೆ, ಭೂ ಮಾಲೀಕರು, 'ಕಾಡುಕೋಣ ಬಂದು ತಿವಿದು ಸಾವನ್ನಪ್ಪಿದ್ದಾರೆ' ಎಂದು ವದಂತಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತರ ಕುಟುಂಬವು, ಇದು ಬೇಜವಾಬ್ದಾರಿಯಿಂದ ನಡೆದ ಘಟನೆ. ದಷ್ಟಪುಷ್ಟವಾದ ಕೋಣವನ್ನು ಅನಿಲ್ ಸಾಕುತ್ತಿದ್ದು, ಇದನ್ನು ಸಾಮಾನ್ಯ ಹಗ್ಗದಿಂದ ಕಟ್ಟಿಹಾಕಿದ್ದಾರೆ.[ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು]
ಅದು ಹಸಿವು ಅಥವಾ ಸಿಟ್ಟಿನಿಂದ ಹಗ್ಗವನ್ನು ತುಂಡರಿಸಿ ದಾಳಿ ನಡೆಸಿದ್ದು, ಇದರಿಂದಾಗಿ ಸಾವು ಸಂಭವಿಸಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಬೆಳ್ತಂಗಡಿ ಶವಾಗಾರದ ಬಳಿ ಕುಟುಂಬಸ್ಥರು ಆಗ್ರಹಿಸಿದರು.












Click it and Unblock the Notifications