ಇಡೀ ದೇಶವೇ ಕಾಂಗ್ರೆಸ್ ಮುಕ್ತ: ನಳಿನ್ ಕುಮಾರ್ ಕಟೀಲ್
ಮಂಗಳೂರು, ಮೇ 25: ಚುನಾವಣೆಯ ಫಲಿತಾಂಶದ ಬಳಿಕ ದೇಶ, ರಾಜ್ಯ ಮತ್ತು ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮುಂದೆ ದೇಶದಲ್ಲಿ ರಚಿಸಲಾಗಿದ್ದ ಮಹಾ ಘಟಬಂಧನ್ ಮತ್ತು ಕಾಂಗ್ರೆಸ್ ಮಿತ್ರ ಪಕ್ಷಗಳು ರಾಜಕೀಯವಾಗಿ ಹೇಳ ಹೆಸರಿಲ್ಲದಂತಾಗಿವೆ ಎಂದು ಅಭಿಪ್ರಾಯಪಟ್ಟರು.
ಪುತ್ತೂರು ಮತ್ತು ಸುಳ್ಯದಲ್ಲಿ ಬಿಜೆಪಿ ಸಂಪೂರ್ಣ ಹಿಡಿತ ಸಾಧಿಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳು ಮತ್ತೆ ತಲೆಯೆತ್ತಲಾರದ ಸ್ಥಿತಿ ನಿರ್ಮಾಣವಾಗಿದೆ. ಸಮೀಕ್ಷೆಗೆ ನಿಲುಕದ ಫಲಿತಾಂಶ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಂದಿದೆ. ಕಾರ್ಯಕರ್ತರ ಅವಿರತ ಪರಿಶ್ರಮ, ಮತದಾರರ ಅಭೂತಪೂರ್ವ ಬೆಂಬಲ ಇದಕ್ಕೆ ಕಾರಣ ಎಂದು ಹೇಳಿದರು.
ಭಾರತ ತ್ಯಾಗ ಭೂಮಿ. ಗುರು ಪರಂಪರೆಯನ್ನು ಹೊಂದಿದೆ. ಗುರುವಿನ ಮಾರ್ಗದರ್ಶನದಲ್ಲಿ ಇಲ್ಲಿನ ರಾಜರು ಆಡಳಿತ ನಡೆಸುತ್ತಿದ್ದರು. ಭಗವಾಧ್ವಜವನ್ನು ಗುರುವಾಗಿ ಸ್ವೀಕರಿಸಿರುವ ರಾಜಕೀಯ ಸಂತನ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ತ್ಯಾಗ ಭೂಮಿ ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯಲಿದ್ದಾರೆ ಎಂದರು.

ಆದರ್ಶ ರಾಜಕಾರಣದ ಮೂಲಕ ಮೋದಿ ಈ ದೇಶದ ಜನರ ಹೃದಯ ಗೆದ್ದಿದ್ದಾರೆ. ಮೋದಿಯವರೊಂದಿಗೆ ಕೆಲಸ ಮಾಡಲು ಅವಕಾಶ ನೀಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರಿಗೆ ನನ್ನ ಅನಂತ ವಂದನೆ ಎಂದು ಹೇಳಿದರು.












Click it and Unblock the Notifications