ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮುಕಿಚ್ಚು ಹಚ್ಚಿದರೆ ಹುಷಾರ್: ಕಮಿಷನರ್ ಎಚ್ಚರಿಕೆ
ಮಂಗಳೂರು, ಜುಲೈ 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿರುವ ಸರಣಿ ಹತ್ಯೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಗೂ ಕಮೆಂಟ್‌ಗಳನ್ನು ಮಾಡಿರುವ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದೆ ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಪೋಟಗೊಳ್ಳುವ ಸಾಧ್ಯತೆಯಿದೆ ಎಂದು ರಾಜ್ಯ ಗುಪ್ತಚರ ದಳ ಮಾಹಿತಿ ನೀಡಿದೆ ಎಂದು ಸುಳ್ಳು ಸಂದೇಶ ರವಾನಿಸಿ ಆತಂಕದ ವಾತಾವರಣ ಸೃಷ್ಟಿಸಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತಿಕಾರವಾಗಿ ಹತ್ಯೆ ಮಾಡಲು ಕರೆ ನೀಡಿರುವ ಪೋಸ್ಟ್ ಹಾಕಲಾಗಿದೆ. ಸುರತ್ಕಲ್‌ನ ಫಾಜಿಲ್ ಕೊಲೆಗೆ ಪ್ರತಿಕಾರವಾಗಿ ಕೊಲೆ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಚರ್ಚೆ ನಡೆಸಿರುವುದು. ಮಂಗಳೂರಿನಲ್ಲಿ ನಡೆದಿರುವ ಕೊಲೆಗೆ ಪ್ರತಿಕಾರವಾಗಿ 10 ಕೊಲೆ ನಡೆಸುವುದಾಗಿ ಪೋಸ್ಟ್ ಮಾಡಲಾಗಿದೆ. ನಿರ್ದಿಷ್ಟ ಜಾತಿ, ಸಮುದಾಯವನ್ನು ಗುರಿಯಾಗಿಸಿ ಹತ್ಯೆಗೆ ಕರೆ ನೀಡುವ ಮಸೇಜ್ ಒಳಗೊಂಡಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿ, ತನಿಖೆ ಪ್ರಗತಿಯಲ್ಲಿದೆ. ಸಾಮಾಜಿಕ ಜಾಲ ತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ, ಟೆಲಿಗ್ರಾಮ್, ಮೆಸೆಂಜರ್ ಸೇರಿದಂತೆ ಇನ್ನಿತರ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಆಕ್ಷೇಪಾರ್ಹ ಪೋಸ್ಟ್ ಮಾಡುವವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಫಾಜಿಲ್ ಹತ್ಯೆ ಪ್ರಕರಣದ ತನಿಖೆಯು ಸಿಸಿಬಿ ಹೆಗಲಿಗೆ ವರ್ಗಾವಣೆಯಾಗಿದೆ. ತನಿಖಾಧಿಕಾರಿಯಾಗಿ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ನೇಮಕಗೊಂಡಿದ್ದಾರೆ. ಸುರತ್ಕಲ್‌ನ ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಜಿಲ್ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ ಠಾಣಾ ನಿರೀಕ್ಷಕ ಚಂದ್ರಪ್ಪ ತನಿಖೆ ನಡೆಸುತ್ತಿದ್ದಾರೆ. ಆದರೆ ಮೃತಪಟ್ಟ ಫಾಜಿಲ್ ಸಂಬಂಧಿಕರು ಪ್ರಕರಣದ ತನಿಖೆಯನ್ನು ಉನ್ನತಾಧಿಕಾರಿಗಳಿಂದ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ನಿಷ್ಪಕ್ಷಪಾತ ಹಾಗೂ ಪರಿಣಾಮಕಾರಿ ತನಿಖೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಹೇಶ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ತಕ್ಷಣ ಮಹೇಶ್ ಕುಮಾರ್ ಅವರು ತನಿಖೆಯನ್ನು ಕೈಗೆತ್ತಿಕೊಂಡು ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.












Click it and Unblock the Notifications