Robbery Case: ಬ್ಯಾಂಕ್ ದರೋಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿ ಹಾಡಹಗಲೇ ಖದೀಮರ ಗುಂಪು ಬ್ಯಾಂಕ್‌ಗೆ ನುಗ್ಗಿ ದರೋಡೆ ನಡೆಸಿರುವ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಶೀಘ್ರ ಆರೋಪಿಗಳ ಪತ್ತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ದರೋಡೆ ಮಾಡಿ ಆರೋಪಿಗಳು ಇಷ್ಟು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟೆಲ್ಲ ಟೋಲ್‌ಗಳನ್ನು ದಾಟಿ ಹೋಗಿದ್ದಾರೆ. ತಕ್ಷಣ ಟೋಲ್ ಗೇಟ್‌ಗಳನ್ನು ಏಕೆ ಬಿಗಿ ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲ ಟೋಲ್‌ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಬೇಕು ಎಂದು ಸಿದ್ದರಾಮಯ್ಯ ಅವರು ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದಾರೆ.

ಏನಿದು ಪ್ರಕರಣ?: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಡಹಗಲೇ ಗ್ಯಾಂಗ್‌ವೊಂದು ಬ್ಯಾಂಕ್ ದರೋಡೆ ಮಾಡಿರುವ ಘಟನೆ ನಡೆದಿದೆ. ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಶಾಖೆಯ ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್‌ಗೆ ನುಗ್ಗಿ ಬಂದೂಕು ತೋರಿಸಿ ಸಿನಿಮೀಯ ಶೈಲಿಯಲ್ಲಿ ಕೋಟ್ಯಂತರ ಹಣ ಎಗರಿಸಿ ಪರಾರಿಯಾಗಿದ್ದಾರೆ. ದರೋಡೆಕೋರರು ಚಿನ್ನ, ನಗದು ಸೇರಿದಂತೆ ಬರೋಬ್ಬರಿ 10ರಿಂದ 12 ಕೋಟಿ ರೂಪಾಯಿ ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ಜೆಡಿಎಸ್ ಕೂಡ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನಿನ್ನೆ ಬೀದರ್‌ನಲ್ಲಿ ಹಾಡಹಗಲೇ ಎಟಿಎಂ ವಾಹನದ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಘಟನೆ ಮಾಸುವ ಮುನ್ನವೇ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಕೋಟೆಕಾರು ಬ್ಯಾಂಕ್ ಕೆ.ಸಿ.ರೋಡು ಶಾಖೆಯಲ್ಲಿ ಕೋಟ್ಯಂತರ ಹಣ, ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ.

ಲೂಟಿಕೋರ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಲೆಕ್ಕದಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದೆ. ಮತ್ತೊಂದು ಕಡೆ ದರೋಡೆಕೋರರ ಅಟ್ಟಹಾಸ ಕೂಡ ಮಿತಿಮೀರಿದೆ. ಸಿದ್ದರಾಮಯ್ಯ ಅವರೇ ನಿಮ್ಮ ಆಡಳಿತ ವೈಫಲ್ಯ ಮತ್ತು ದುರಾಡಳಿತದಿಂದ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು, ತಲೆತಗ್ಗಿಸುವಂತೆ ಮಾಡಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ವಿಪಕ್ಷ ನಾಯಕ ಅರ್.ಅಶೋಕ್ ಅವರು ಬೀದರ್‌ನಲ್ಲಿ ನಡೆದಿರುವ ದರೋಡೆ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ತಾಲಿಬಾನ್ ಮಾಡುತ್ತಿದೆ. ಬೀದರ್‌ನಲ್ಲಿ ಹಾಡಹಗಲೇ ಎಟಿಎಂ ವಾಹನವನ್ನು ದರೋಡೆ ಮಾಡಿ, ಸಿಬ್ಬಂದಿಯನ್ನು ಎಲ್ಲರೆದುರಲ್ಲೇ ಗುಂಡಿಕ್ಕಿ ಕೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಅರಾಜಕತೆಯ ದುರಾಡಳಿತದಲ್ಲಿ ಅಪರಾಧಿಗಳಿಗೆ ಕಾನೂನಿನ ಭಯವೂ ಇಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಈ ಕೊಲೆಗಡುಕರಿಗೆ ಅಮಾಯಕ ಪಟ್ಟವನ್ನು ಕಟ್ಟುತ್ತೀರೋ ಅಥವಾ ಮಾನಸಿಕ ಅಸ್ವಸ್ಥ ಎಂಬ ಪಟ್ಟ ಕಟ್ಟುತ್ತೀರೋ? ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications