ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ
ಮಂಗಳೂರು, ಏಪ್ರಿಲ್, 17: ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ.
ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಸೇರಿದ ಕಾರಿನ ಗಾಜು ಪುಡಿ ಪುಡಿ ಮಾಡಲಾಗಿದೆ.

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ನಾಮಪತ್ರ ಸಲ್ಲಿಸಿ ವಾಪಾಸ್ ತೆರಳುತ್ತಿದ್ದಾಗ ರಕ್ಷಿತ್ ಶಿವರಾಂ ರೋಡ್ ಶೋ ನಡೆಸಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಂತರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.ಅರುಣ್ ಪುತ್ತಿಲ ಬೆಂಬಲಕ್ಕೆ ನಿಂತ ಕಾರ್ಯಕರ್ತರು
ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷದ ವಿರುದ್ದ ಹಿಂದೂ ಮುಖಂಡ ಅರುಣ್ ಪುತ್ತಿಲ ಬಂಡಾಯ ಎದ್ದಿದ್ದು, ಪುತ್ತೂರಿನಲ್ಲಿ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಅವರು ದರ್ಬೆಯಿಂದ ಪುತ್ತೂರಿಗೆ ಬೃಹತ್ ರೋಡ್ ಶೋ ನಡೆಸಿದ್ದು, ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಅರುಣ್ ಪುತ್ತಿಲ ಬೆಂಬಲಕ್ಕೆ ನಿಂತಿದ್ದರು.
ಹೀಗೆ ಬಂಡಾಯ ಸ್ಪರ್ಧೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಒಕ್ಕಲಿಗ ವೋಟ್ ಬ್ಯಾಂಕ್ ಕಾರಣದಿಂದ ಬ್ರಾಹ್ಮಣ ಅಭ್ಯರ್ಥಿ ಅರುಣ್ ಪುತ್ತಿಲಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಂದಲೂ ಮನವೊಲಿಕೆ ಯತ್ನ ನಡೆದಿದ್ದು, ಯಾವುದಕ್ಕೂ ಬಗ್ಗದೆ ಸ್ಪರ್ಧೆ ಮಾಡುವುದಾಗಿ ಸವಾಲೊಡ್ಡಿದ್ದಾರೆ.












Click it and Unblock the Notifications