ಮಂಗಳೂರು; ಸ್ಯಾಟಲೈಟ್ ಫೋನ್ ಬಳಕೆ, ಗುಪ್ತಚರ ಇಲಾಖೆ ಎಚ್ಚರಿಕೆ
ಮಂಗಳೂರು, ಜೂ 9: ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿ ಕಾಯ್ದೆ ವಿವಾದದ ಬಳಿಕ ಉಗ್ರರ ಸ್ಲೀಪರ್ ಸೆಲ್ ಎಂದೇ ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಮತ್ತೆ ಉಗ್ರರ ಚಟುವಟಿಕೆಗಳು ಆರಂಭಗೊಂಡಿರುವ ಸಂಶಯಗಳು ಮೂಡಲಾರಂಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಡುಪ್ರದೇಶಗಳಲ್ಲಿ ನಿಷೇಧವಿರುವ ಸ್ಯಾಟಲೈಟ್ ಫೋನ್‌ಗಳ ಬಳಕೆಯಾಗುತ್ತಿರುವ ಮಾಹಿತಿ ಇದೀಗ ಮತ್ತೆ ಕೇಂದ್ರ ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೆ ಮಂಗಳೂರು ಮತ್ತು ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆಲವು ಗೂಡಂಗಡಿಗಳು ಉಗ್ರರಿಗೆ ಮಾಹಿತಿ ನೀಡುವ, ಶಸ್ತ್ರಾಸ್ತ್ರಗಳನ್ನು ದಾಸ್ತಾನಿಡುವ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಹಾಕಿದೆ.

ವಿವಿಧ ಕಡೆ ಸ್ಪೋಟಗಳಲ್ಲಿ ಬಳಕೆ
ಉಗ್ರರ ಸ್ಲೀಪರ್ ಸೆಲ್ ಎಂದು ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಝ್ ಭಟ್ಕಳ್ ಆದಿಯಾಗಿ ಹಲವಾರು ಉಗ್ರರು ತನ್ನ ಕಾರ್ಯಾಚರಣೆಯನ್ನು ನಡೆಸಿದ್ದರು. ಮಂಗಳೂರಿನಲ್ಲೇ ತಯಾರಾದ ಬಾಂಬ್‌ಗಳು ದೇಶದ ವಿವಿಧೆಡೆಗಳಲ್ಲಿ ನಡೆದ ಸ್ಪೋಟಗಳಲ್ಲಿ ಬಳಸಲಾಗಿದೆ ಎನ್ನುವ ಸತ್ಯವೂ ಬಹಿರಂಗಗೊಂಡಿತ್ತು. ಈ ನಡುವೆ ಇದೀಗ ಇಂಥಹುದೇ ಒಂದು ಸ್ಪೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಹೊರಹಾಕಿದ್ದು, ಆತಂತಕ್ಕೆ ಕಾರಣವಾಗಿದೆ.
ಕಡಲ ನಗರಿಯಲ್ಲಿ ಮತ್ತೆ ಉಗ್ರರ ಸಪ್ಪಳ ಕೇಳಿಸಲಿದೆಯೇ ಎನ್ನುವ ಸಂಶಯಗಳು ಮೂಡಲಾರಂಭಿಸಿದೆ. ಬಹುತೇಕ ಎಲ್ಲಾ ನಟೋರಿಯಸ್ ಉಗ್ರ ಸಂಘಟನೆಗಳ ಸ್ಲೀಪರ್ ಸೆಲ್ ಎಂದೇ ಗುರುತಿಸಿಕೊಂಡಿರುವ ಮಂಗಳೂರಿನಲ್ಲೇ ದೇಶದ ವಿವಿಧೆಡೆಗಳಲ್ಲಿ ನಡೆದ ಸ್ಪೋಟಗಳ ಬಾಂಬ್ ತಯಾರಿಯಾಗುತ್ತಿತ್ತು ಎನ್ನುವುದು ಈಗಾಗಲೇ ಬಹಿರಂಗಗೊಂಡ ಸತ್ಯವೂ ಆಗಿದೆ.

ಸ್ಫೋಟದ ಪ್ಲಾನ್ ತಯಾರಿಸಿಕೊಂಡಿದ ಭಟ್ಕಳ್
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಇದೇ ಮಂಗಳೂರಿನಲ್ಲಿ ವರ್ಷಗಳ ಕಾಲ ತಂಗಿದ್ದು, ದೇಶದೆಲ್ಲೆಡೆ ನಡೆದ ಸ್ಪೋಟದ ಪ್ಲಾನ್ ತಯಾರಿಸಿಕೊಂಡಿದ್ದರು. ಈ ಉಗ್ರರಿಗೆ ಸಹಕಾರಿಯಾಗುವಂತಹ ವ್ಯಕ್ತಿಗಳೇ ಸ್ಲೀಪರ್ ಸೆಲ್‌ಗಳಾಗಿದೆ.
ಈ ಸ್ಲೀಪರ್ ಸೆಲ್‌ಗಳು ಯಾವ ರೂಪದಲ್ಲೂ ಇರಬಹುದಾಗಿದ್ದು, ಸೇಲ್ಸ್ ಮ್ಯಾನ್, ಬೀದಿ ಬದಿ ವ್ಯಾಪಾರಿಯೂ ಆಗಿರಬಹುದು. ತಮ್ಮ ಬಾಸ್ ನಿಂದ ಬರುವ ಸೂಚನೆಯ ಮೇರೆಗೆ ಈ ಸ್ಲೀಪರ್ ಸೆಲ್ ಗಳು ನಿರ್ಧಿಷ್ಟ ಸಂದರ್ಭಕ್ಕಾಗಿ ಕಾಯುವ ಹಾಗೂ ಅಗತ್ಯ ಬಿದ್ದಾಗ ಬಾಂಬ್ ಸ್ಪೋಟದಂತಹ ಇಲ್ಲವೇ ಇತರ ಗಲಭೆಗಳಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತದೆ. ತಮಗೆ ವಹಿಸಿದ ಟಾಸ್ಕ್ ಅನ್ನು ಪೂರ್ಣಗೊಳಿಸಲು ವರ್ಷಗಟ್ಟಲೆಯೂ ಕಾಯುವ ಈ ಸೆಲ್ ಗಳು ಮೇಲ್ನೋಟಕ್ಕೆ ಸಾಮಾನ್ಯರಂತೆ ಕಂಡರೂ ಇವರ ಅಜೆಂಡಾ ಮಾತ್ರ ಆತನ ಮುಖ್ಯಸ್ಥನ ಆಜ್ಞೆಯನ್ನು ಪಾಲಿಸುವುದೊಂದೇ ಆಗಿರುತ್ತದೆ. ಮಂಗಳೂರಿನಲ್ಲಿ ಇಂತಹ ಹಲವು ಸೆಲ್‌ಗಳು ಈ ಹಿಂದೆ ಕಾರ್ಯಾಚರಿಸುತ್ತಿದ್ದು, ಉಳ್ಳಾಲ, ಚೆಂಬುಗುಡ್ಡೆ, ಅತ್ತಾವರ ಮೊದಲಾದ ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಉಗ್ರ ಸಂಘಟನೆಗಳಿಗೆ ನಿಯುಕ್ತಿಗೊಂಡ ಕೇರಳದ ಹಲವು ಯುವಕರು
ತಾವಿರುವ ಪ್ರದೇಶದ ಪ್ರತಿಯೊಂದು ಇಂಚಿಂಚಿನ ಮಾಹಿತಿಯನ್ನು ಕಲೆ ಹಾಕುವಲ್ಲೂ ಈ ಸ್ಲೀಪರ್ ಸೆಲ್‌ಗಳು ಪರಿಣಿತವಾಗಿದ್ದು, ಓರ್ವ ಗುಪ್ತಚರನ ರೀತಿಯಲ್ಲಿ ಇದು ಕಾರ್ಯಾಚರಿಸುತ್ತದೆ. ಇದೀಗ ಈ ಸಾಲಿಗೆ ಮಂಗಳೂರು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹೆಚ್ಚಾಗಿ ಕಾರ್ಯಾರಂಭಿಸಿರುವ ಗೂಡಂಗಡಿಗಳೂ ಸೇರ್ಪಡೆಗೊಂಡಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಕೇರಳದಿಂದ ಈಗಾಗಲೇ ಹಲವು ಯುವಕರು ಉಗ್ರ ಸಂಘಟನೆಗಳಿಗೆ ನಿಯುಕ್ತಿಗೊಂಡಿದ್ದು, ಈ ಉಗ್ರರಿಗೆ ಮಾಹಿತಿ ನೀಡುವ ಮತ್ತು ಉಗ್ರ ಚಟುವಟಿಕೆ ನಡೆಸಲು ಬೇಕಾದ ಶಸ್ತ್ರಾಸ್ತಗಳ ಪೂರೈಕೆ ಮತ್ತು ದಾಸ್ತಾನಿಗೆ ಈ ಗೂಡಂಗಡಿಗಳು ಬಳಕೆಯಾಗುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾತ್ರಿ ಸಮಯದಲ್ಲಿ ಇಂಥಹ ಗೂಡಂಗಳಿಗಳ ಬಳಿ ಐಷಾರಾಮಿ ಕಾರುಗಳು ನಿಲ್ಲುವುದನ್ನೂ ಗುಪ್ತಚರ ಇಲಾಖೆ ಗಮನಿಸಿದ್ದು, ಈ ಬಗ್ಗೆ ಈಗಾಗಲೇ ಇಲಾಖೆ ತನಿಖೆಯನ್ನು ಆರಂಭಿಸಿದೆ.

ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹ
ಕೇಂದ್ರ ಸರಕಾರದ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಮಂಗಳೂರಿನಲ್ಲಿ ನಡೆದ ಭಾರೀ ಪ್ರತಿಭಟನೆಗಳ ಜೊತೆಗೇ ಈ ಸ್ಲೀಪರ್ ಸೆಲ್ ಗಳೂ ಆಕ್ಟೀವ್ ಆಗಿರೋದರ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಕೇಂದ್ರ ಸರಕಾರದ ವಿರುದ್ಧ ಭಾರೀ ಆಕ್ರೋಶ ಭುಗಿಲೆಲೆದ್ದಿರುವ ಈ ಸಮಯದಲ್ಲಿ ಉಗ್ರ ಸಂಘಟನೆಗಳಿಗೆ ಸಪೋರ್ಟ್ ದೊರಕುವ ಉದ್ದೇಶದಿಂದಲೂ ಈ ಸ್ಲೀಪರ್ ಸೆಲ್‌ಗಳು ತಮ್ಮ ಇರುವಿಕೆಯನ್ನು ಸಾಬೀತುಪಡಿಸಲು ದುಷ್ಕೃತ್ಯಗಳಲ್ಲಿ ಕೈ ಹಾಕುವ ಸಾಧ್ಯತೆಗಳೂ ಇದೆ ಎನ್ನುವುದು ಗುಪ್ತಚರ ಇಲಾಖೆಯ ಅನುಮಾನವಾಗಿದೆ. ಈ ನಡುವೆ ದಕ್ಷಿಣ ಕನ್ನಡ ಹಾಗು ಚಿಕ್ಕಮಗಳೂರು ಜಿಲ್ಲೆಯನ್ನು ಆವರಿಸಿಕೊಂಡ ದಟ್ಟಾರಣ್ಯಗಳಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳು ಮತ್ತೆ ಬಳಕೆಯಾಗುತ್ತಿರುವ ಬಗ್ಗೆಯೂ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.












Click it and Unblock the Notifications