ವೈರಲ್ ಆಯ್ತು ಧರ್ಮಸ್ಥಳ ಕೆಎಸ್ಆರ್ ಟಿಸಿ ಡಿಪೋ ಕರ್ಮಕಾಂಡ
ಮಂಗಳೂರು, ಜೂನ್ 06: ಧರ್ಮಸ್ಥಳದ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಭಾರೀ ಅಕ್ರಮಗಳು ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.
ಧರ್ಮಸ್ಥಳ ಕೆ ಎಸ್ ಆರ್ ಟಿ ಸಿ ಡಿಪೋ ಬಸ್ ಚಾಲಕರೊಬ್ಬರು ಈ ಅಕ್ರಮಗಳ ಬಗ್ಗೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ ಡಿಪೋ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಕೇಳಿಬರುತ್ತಿದೆ.
ಡಿಪೋದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಬಸ್ ಚಾಲಕನೋರ್ವ ಬಯಲಿಗೆಳೆದಿದ್ದಾರೆ. ಬಸ್ ಗಳಿಗೆ ಹೊಸ ಟಯರ್ ಹೆಸರಿನಲ್ಲಿ ರಿಸೋಲ್ ಟಯರ್ ಗಳನ್ನು ಹಾಕಲಾಗುತ್ತಿದೆ. ಬಸ್ ಡಿಪೋದಲ್ಲಿ ಸೇವೆಯಲ್ಲಿರುವ ಯಾವೊಬ್ಬ ಸಿಬ್ಬಂದಿಯೂ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ಡಿಪೋಗೆ ನಿಯೋಜನೆ ಗೊಂಡಿರುವ ಸಿಬ್ಬಂದಿಗಳು ತಮಗೆ ಬೇಕಾದ ಸಮಯಕ್ಕೆ ಡಿಪೋಕ್ಕೆ ಬರುವುದು. ತಮಗೆ ತೋಚಿದ ಸಮಯದಲ್ಲಿ ಡಿಪೋದಿಂದ ಹೋಗುವುದು. ಅಲ್ಲದೇ ಸಂಚಾರ ಮುಗಿಸಿ ವಾಶ್ ಗೆ ಬರುವ ಬಸ್ ಗಳನ್ನು ಇಲ್ಲಿ ನಿಯೋಜಿಸಿದ ಸಿಬ್ಬಂದಿಗಳು ತೊಳೆಯುತ್ತಿಲ್ಲ ಎಂದು ಚಾಲಕ ರಮೇಶ್ ಆರೋಪಿಸಿದ್ದಾರೆ.
ರಾತ್ರಿ ಪೂರ್ತಿ ಬಸ್ ಚಾಲನೆ ಮಾಡಿ ಬಂದ ಚಾಲಕನೇ ಬೆಳಗ್ಗೆ ಮತ್ತೆ ಬಸ್ ತೊಳೆಯಬೇಕಾದ ಸ್ಥಿತಿ ಇಲ್ಲಿದೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಕೂಡ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಲಕ ರಮೇಶ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗಳು ಆರಂಭವಾಗಿವೆ.












Click it and Unblock the Notifications