ಆಹಾರ ಕಿಟ್ಟಲ್ಲಿ ಪುತ್ತೂರಿನ ಹುಡುಗನಿಗೆ ಸಿಕ್ಕಿತ್ತು ಅಮೂಲ್ಯ ವಸ್ತು
ಮಂಗಳೂರು, ಏಪ್ರಿಲ್ 16: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವವರಿಗೆ ಶಾಸಕರ ವಾರ್ ರೂಂನಿಂದ ವಿತರಿಸಲಾದ ಆಹಾರದ ಕಿಟ್ ನಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ಬಾಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಪುತ್ತೂರು ನಗರ ಹೊರವಲಯದ ಕರ್ಮಲ ನಿವಾಸಿ ಹನೀಫ್ ಎಂಬುವರ ಮಗ ಹುಕಾಸ್ ಎಂಬಾತ ತನಗೆ ಸಿಕ್ಕಿದ ಚಿನ್ನದ ಉಂಗುರವನ್ನು ವಾಪಸ್ ನೀಡಿದ್ದಾನೆ. ಹನೀಫ್ ಅವರ ಮನೆಗೆ ವಾರದ ಹಿಂದೆ ಪುತ್ತೂರಿನ ಬಂಟರ ಸಂಘದ ವತಿಯಿಂದ, ಶಾಸಕರ ವಾರ್ ರೂಂ ಮೂಲಕ ಆಹಾರದ ಕಿಟ್ ವಿತರಿಸಲಾಗಿತ್ತು. ಈ ಕಿಟ್ ಪ್ಯಾಕ್ ಮಾಡುವ ಸಂದರ್ಭ ಪ್ಯಾಕ್ ಮಾಡಿದ ವ್ಯಕ್ತಿಯ ಚಿನ್ನದ ಉಂಗುರ ಅಕಸ್ಮಾತ್ ಆಗಿ ಸೇರಿಕೊಂಡಿತ್ತು.

ಕಿಟ್ ತೆರೆದ ಸಂದರ್ಭ ಉಂಗುರ ಈ ಹುಡುಗನಿಗೆ ಸಿಕ್ಕಿದೆ. ಈ ಕುರಿತು ಆತ ಸ್ಥಳೀಯ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಅವರ ಮೂಲಕ ಉಂಗುರದ ವಾರಸುದಾರರನ್ನು ಪತ್ತೆ ಹಚ್ಚಿ ಅವರಿಗೆ ಉಂಗುರವನ್ನು ಹಿಂದಿರುಗಿಸಲಾಯಿತು. ಹನ್ನೆರಡು ವರ್ಷದ ಹುಕಾಸ್ ನ ಪ್ರಾಮಾಣಿಕತೆಗೆ ಶಾಸಕ ಸಂಜೀವ ಮಠಂದೂರು ಆ ಹುಡುಗನ ಮನೆಗೆ ಹೋಗಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.












Click it and Unblock the Notifications