ದ.ಕನ್ನಡ ಲೋಕಸಭಾ ಕ್ಷೇತ್ರ: ಹಿಂದುತ್ವ V/S ಬಿಜೆಪಿ ಕೇಸರಿ ಕಲಿಗಳ ನಡುವೆಯೇ ಬಿಗ್ ಫೈಟ್
ಮಂಗಳೂರು, ಮಾರ್ಚ್ 1: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಕಮಲ ಪಾಳಯದ ಬಾಗಿಲು ತಟ್ಟುತ್ತಿದ್ದ ಪುತ್ತಿಲ, ಒಮ್ಮಿಂದೊಮ್ಮೆ ತಮ್ಮ ನಿಲುವು ಬದಲಿಸಿದ್ದಾರೆ. ವಿಧಾನಸಭಾ ಚುನಾವಣೆಯ ಬಳಿಕ ಲೋಕ ಅಖಾಡದಲ್ಲೂ ಕೇಸರಿ ಕಲಿಗಳ ನಡುವೆಯೇ ಗುದ್ದಾಟಕ್ಕೆ ವೇದಿಕೆಯೊಂದು ನಿರ್ಮಾಣವಾದಂತಿದ.
ಕೇಸರಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಅಖಾಡ ಈ ಬಾರಿ ಬಹಳ ಇಂಟ್ರಸ್ಟಿಂಗ್ ಆಗಿದೆ. ಮೂರು ದಶಕದಿಂದ ಬಿಜೆಪಿ ತೆಕ್ಕೆಯಲ್ಲಿರುವ ಸಂಸದ ಸ್ಥಾನದ ಮೇಲೆ ಈ ಬಾರಿ ಹಲವರ ಕಣ್ಣು ಬಿದ್ದಿದೆ. ಒಂದು ಕಡೆಯಿಂದ ಕಾಂಗ್ರೆಸ್ ಈ ಕ್ಷೇತ್ರ ಪಡೆಯಲು ಹರಸಾಹಸ ಪಡುತ್ತಿದ್ದರೆ,ಇತ್ತ ಬಿಜೆಪಿಯ ಒಳಗೊಳಗೇ ದಕ್ಷಿಣ ಕನ್ನಡದ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಗ್ ಫೈಟ್ ನಡೆಯುತ್ತಲೇ ಇದೆ.

ಈ ಮಧ್ಯೆ ವಿಧಾನ ಸಭಾ ಚುನಾವಣೆಯ ಸಂದರ್ಭ ಬಿಜೆಪಿಯ ರೆಬೆಲ್ ಲೀಡರ್ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯನ್ನ ಸೋಲಿಸಿ ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಸೂಕ್ತ ಸ್ಥಾನ ಮಾನ ನೀಡದೆ ಹೋದರೆ ಈ ಬಾರಿಯ ಲೋಕಸಭಾ ಚುನಾವಣೆಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಬಿಜೆಪಿ ನಾಯಕರು ಹಾಗೂ ಅರುಣ್ ಕುಮಾರ್ ಪುತ್ತಿಲ ನಡುವೆ ಹಲವು ಮಾತುಕತೆಗಳು ನಡೆದರೂ ಅದ್ಯಾವುದು ಫಲ ನೀಡಿದಂತೆ ಕಾಣಿಸುತ್ತಿಲ್ಲ.ಇದೇ ಕಾರಣಕ್ಕೆ ಇದೀಗ ಪುತ್ತಿಲ ತಮ್ಮ ಪುತ್ತಿಲ ಪರಿವಾರದ ಮೂಲಕ ಬಿಜೆಪಿಯ ವಿರುದ್ಧವೇ ಮತ್ತೊಮ್ಮೆ ಸೆಟೆದೆದ್ದು ನಿಂತಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಬಂಡಾಯದ ರಣಕಹಳೆ ಮೊಳಗಿಸಿದ್ದಾರೆ.
ರೆಬೆಲ್ ಲೀಡರ್ ಅರುಣ್ ಪುತ್ತಿಲರನ್ನ ಬಿಜೆಪಿಗೆ ಕರೆತರಲು ದೊಡ್ಡ ಮಟ್ಟದಲ್ಲೇ ತೆರೆ ಮರೆಯ ಕಸರತ್ತು ನಡೆದಿತ್ತು. ಹೈ ಕಮಾಂಡ್ ಅಂಗಳದಲ್ಲೂ ಈ ವಿಚಾರ ಸದ್ದು ಮಾಡಿತ್ತು.ಹಲವು ಸುತ್ತಿನ ಮಾತುಕತೆಗಳು ನಡೆದರು ಅದ್ಯಾವುದು ಫಲ ನೀಡಲಿಲ್ಲ. ಅರುಣ್ ಕುಮಾರ್ ಪುತ್ತಿಲ ತಮ್ಮ ಹಠ ಬಿಡಲಿಲ್ಲ.

ಬಿಜೆಪಿ ತನ್ನ ನಿಲುವು ಬದಲಾಯಿಸಲಿಲ್ಲ, ಈ ಹಿನ್ನಲೆ ಕಳೆದ ಒಂದು ತಿಂಗಳ ಹಿಂದೆ ಪುತ್ತಿಲ ಪರಿವಾರದ ಮುಖಂಡರು ಪುತ್ತಿಲ ಬೆಂಬಲಿಗರ ಸಭೆ ನಡೆಸಿ, ಬಿಜೆಪಿ ಪಕ್ಷಕ್ಕೆ 3 ದಿನದ ಗಡುವು ನೀಡಿದ್ದರು. 3 ದಿನದ ಒಳಗಾಗಿ ಅರುಣ್ ಪುತ್ತಿಲಾಗೆ ಪಕ್ಷದ ಪುತ್ತೂರು ವಿಧಾನಾಸಭಾ ಕ್ಷೇತ್ರ ಅಧ್ಯಕ್ಷ ಸ್ಥಾನ ನೀಡಬೇಕು ಹಾಗು ಮುಂದಿನ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಷರತ್ತು ವಿಧಿಸಿದ್ದರು. ಆದರೆ ಈ ಡೆಡ್ ಲೈನ್ ಹೈ ಕಮಾಂಡ್ ಕೆಂಗಣ್ಣಿಗೆ ಗುರಿಯಾಗಿತ್ತು.
ಪುತ್ತಿಲ ಪರಿವಾರದ ಬೇಡಿಕೆಯನ್ನು ಮೌನವಾಗಿಯೇ ಬಿಜೆಪಿ ತಿರಸ್ಕರಿಸಿತ್ತು. ಈ ಹಿನ್ನಲೆ ಅರುಣ್ ಪುತ್ತಿಲ ಹಾಗು ಪುತ್ತಿಲ ಪರಿವಾರದ ಮುಖಂಡರು ಲೋಕಸಭಾ ಚುನಾವಣೆಗೂ ಬಂಡಾಯದ ಕಹಳೆಯನ್ನೂದಿದ್ದಾರೆ. ಮುಂಬರುವ ಎಲ್ಲ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಪುತ್ತಿಲ ಪರಿವಾರದ ಸ್ಪರ್ಧೆ ಖಚಿತ ಎನ್ನುವುದನ್ನು ಘೋಷಿಸಿದ್ದಾರ.
ಇತ್ತ ಪುತ್ತಿಲ ಬಂಡಾಯ ಸ್ಪರ್ಧೆಯ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತಿಲ ಬಂಡಾಯದ ಸ್ಪರ್ಧೆ ಬಗ್ಗೆ ಡೋಂಟ್ ಕೇರ್ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಒಂದು ರಾಷ್ಟೀಯ ಪಕ್ಷವಾಗಿ ಈ ಬಾರಿ ಮತ್ತೆ ಗೆಲ್ಲೋದು ನಿಶ್ಚಿತ. ಯಾರ ಸ್ಪರ್ಧೆ ಬಗ್ಗೆಯೂ ವಿಚಲಿತರಾಗೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ .
ಒಟ್ಟಾರೆ ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಬಾರಿಯಂತೆ ಬಿಜೆಪಿಯ ವಿರುದ್ಧ ಈ ಬಾರಿ ಸ್ಪರ್ಧಿಸಿದರೆ ಅದು ಮೋದಿ ವಿರುದ್ಧ ಸ್ಪರ್ಧಿಸಿದಂತಾಗುತ್ತದೆ. ಹೀಗಾಗಿ ಮೋದಿ ಅಲೆಯ ವಿರುದ್ಧ ಅರುಣ್ ಕುಮಾರ್ ಪುತ್ತಿಲ ಗೆದ್ದು ಬರ್ತಾರಾ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.












Click it and Unblock the Notifications