ಕೈತಪ್ಪಿದ ಟಿಕೆಟ್: ಮೂಡಬಿದ್ರೆಯಲ್ಲಿ ಬಂಡಾಯ ಬಾವುಟ ಹಾರಿಸಿದ ಜಗದೀಶ್ ಅಧಿಕಾರಿ
ಮಂಗಳೂರು ಏಪ್ರಿಲ್ 17: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿ ಉಮಾನಾಥ್ ಕೋಟ್ಯಾನ್ ಅವರಿಗೆ ಟಿಕೆಟ್ ನೀಡಿರುವುದು ಬಿಜೆಪಿ ಪಾಳಯದಲ್ಲಿ ಭಿನ್ನಮತ ಸ್ಪೋಟಕ್ಕೆ ಕಾರಣವಾಗಿದೆ.
ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ತಮ್ಮನ್ನು ಕಡೆಗಣಿಸಿ ಉಮಾನಾಥ್ ಕೋಟ್ಯಾನ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಿಜೆಪಿ ವರಿಷ್ಠರ ವಿರುದ್ಧ ಜಗದೀಶ್ ಅಧಿಕಾರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಮೂಡಬಿದ್ರೆಯಲ್ಲಿ ಗೆಲ್ಲುವ ಕುದುರೆಯನ್ನು ನಿಲ್ಲಿಸಿಲ್ಲ. ಅದರ ಬದಲಿಗೆ ಸತ್ತ ಕತ್ತೆಯನ್ನು ನಿಲ್ಲಿಸಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ಕೈತಪ್ಪಿರುವುದರಿಂದ ಸಿಟ್ಟಿಗೆದ್ದಿರುವ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಉಮಾನಾಥ್ ಕೋಟ್ಯಾನ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷಕ್ಕಾಗಿ ಈವರೆಗೆ ನಿಯತ್ತಿನಿಂದ ದುಡಿದಿದ್ದೇನೆ. ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ್ದೇನೆ. ಆದರೆ ಪಕ್ಷ ಈ ಬಾರಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಗೆಲ್ಲುವ ಕುದುರೆ ಬದಲು ಕ್ಷೇತ್ರದಲ್ಲಿ ಸತ್ತ ಕತ್ತೆಗೆ ಟಿಕೆಟ್ ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಮೂಡಬಿದ್ರೆಯಲ್ಲಿ ನಾನು ಸ್ವಂತ ಖರ್ಚಿನಲ್ಲಿ ಮಾಡಿದ ಬಿಜೆಪಿ ಕಚೇರಿಗೆ ಈಗ ಬೀಗ ಹಾಕಿದ್ದೇನೆ. ಪಕ್ಷ ಬಿಡುವ ವಿಚಾರವಾಗಿ ಎರಡು ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಬಂಡಾಯ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ನಡುವೆ ಗೊಂದಲ ಸೃಷ್ಠಿಯಾಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಜಗದೀಶ್ ಅಧಿಕಾರಿ ಬಂಡಾಯದ ಬಾವುಟ ಹಾರಿಸಿರುವುದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಈ ಬಂಡಾಯವನ್ನು ಬಿಜೆಪಿ ನಾಯಕರು ಹೇಗೆ ಶಮನಗೊಳಿಸುತ್ತಾರೆ ಎಂಬುದೇ ಈಗ ಕುತೂಹಲ.












Click it and Unblock the Notifications