ಮಂಗಳೂರು: ಸ್ವಯಂಚಾಲಿತವಾಗಿ ತೂಗಿಕೊಳ್ಳುವ ತೊಟ್ಟಿಲು ತಯಾರು!
ಮಂಗಳೂರಿನ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಬಿ.ಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ಸ್ವಯಂಚಾಲಿತವಾಗಿ ತೂಗುವ ತೊಟ್ಟಿಲನ್ನು ತಯಾರಿಸಿದ್ದಾರೆ.
ಮಂಗಳೂರು, ಜೂನ್ 21 : ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವುದು ಕೆಲವೊಮ್ಮೆ ತನ್ನ ಕೆಲಸದೊತ್ತಡದಲ್ಲಿ ತಾಯಿಯೊಬ್ಬಳಿಗೆ ತ್ರಾಸದಾಯಕ ಕೆಲಸವೆಂಬುದನ್ನು ಅಲ್ಲಗಳೆಯಲಾಗದು. ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಬಿ.ಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಮೂಲಕ ಉದ್ಯೋಗಕ್ಕೆ ತೆರಳುವ ತಾಯಿಯ ಕಷ್ಟವನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ.
ಈ ತೊಟ್ಟಿಲಲ್ಲಿ ಮಗುವನ್ನು ಮಲಗಿಸಿದರಷ್ಟೇ ಸಾಕು, ತೊಟ್ಟಿಲು ತನ್ನಿಂತಾನಾಗಿಯೇ ತೂಗುತ್ತದೆ. ಅಷ್ಟೇ ಅಲ್ಲ, ಮಗು ಹಾಸಿಗೆ ಒದ್ದೆ ಮಾಡಿದಾಗಲೂ ಅದು ತಾಯಿಯಯನ್ನು ಎಚ್ಚರಿಸುತ್ತದೆ.
"ನಮ್ಮ ಗೆಳತಿಯ ಸಹೋದರಿಯೊಬ್ಬಳು ಮಗುವಿನ ತೊಟ್ಟಿಲನ್ನು ಸದಾ ತೂಗುತ್ತಾ ಇರಲು ಕಷ್ಟಪಡುತ್ತಿರುವುದನ್ನು ನೋಡಿ ನಾವ್ಯಾಕೆ ಸ್ವಯಂಚಾಲಿತ ತೊಟ್ಟಿಲನ್ನು ತಯಾರಿಸಬಾರದು ಎಂದು ಈ ಯೋಜನೆ ಕೈಗೆತ್ತಿಕೊಂಡು ಮಾದರಿಯೊಂದನ್ನು ಸಿದ್ಧಪಡಿಸಿದ್ದೇವೆ" ಎಂದು ಈ ತೊಟ್ಟಿಲನ್ನು ವಿನ್ಯಾಸಗೊಳಿಸಿದ ತಂಡದಲ್ಲಿರುವ ವರದರಾಜ್ ಭಟ್ ಹೇಳುತ್ತಾರೆ.

ಅವರು ತಮ್ಮ ಸಹಪಾಠಿಗಳಾದ ಸುಪರ್ಣಾ ಪೈ, ಸ್ನೇಹಾ ಭಟ್ ಮತ್ತು ವರುಣ್ ಶೆಣೈ ಜತೆಗೂಡಿ ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್ ಅಂಗವಾಗಿ ಈ ತೊಟ್ಟಿಲು ಸಿದ್ಧಪಡಿಸಿದ್ದಾರೆ. ಅವರಿಗೆ ಈ ನಿಟ್ಟಿನಲ್ಲಿ ಅವರ ಪ್ರಾಧ್ಯಾಪಕಿ ಜಯಶ್ರೀ ಮಾರ್ಗದರ್ಶನವೂ ದೊರೆತಿದೆ.
ಈ ತೊಟ್ಟಿಲು ಸ್ವಯಂಚಾಲಿತವಾಗಿ ತೂಗುವುದಲ್ಲದೆ ತೊಟ್ಟಿಲಿನಲ್ಲಿ ಅಳವಡಿಸಲಾಗಿರುವ ಧ್ವನಿ ಸೆನ್ಸರುಗಳ ಮುಖಾಂತರ ಮಗುವಿನ ಚಲನವಲನಗಳ ಮೇಲೆ ನಿಗಾ ಇಡಬಹುದಾಗಿದೆ. ಮಗು ಹಾಸಿಗೆ ಒದ್ದೆ ಮಾಡಿದಾಗ ಅದನ್ನು ಬದಲಾಯಿಸುವಂತೆ ಹೆತ್ತವರಿಗೆ ಸಂದೇಶ ಕೂಡ ಈ ಸಾಧನ ಕಳುಹಿಸುವುದು.
ಮಗು ಅತ್ತಾಗಲೆಲ್ಲ ತೊಟ್ಟಿಲು ತೂಗುವುದರ ಜತೆಗೆ ನಿಗದಿತ ಅವಧಿಯೊಳಗೆ ಮಗು ಅಳು ನಿಲ್ಲಿಸದೆ ಹೋದಾಗಲೂ ಮೊಬೈಲ್ ಮೂಲಕ ಹೆತ್ತವರಿಗೆ ಗಮನ ಕೊಡಿ ಎನ್ನುವ ಸಂದೇಶ ಹೋಗುತ್ತದೆ. ತೊಟ್ಟಿಲಿಗೆ ಅಳವಡಸಲಾಗಿರುವ ವೆಬ್ ಕ್ಯಾಮೆರಾ ಮೂಲಕ ಹೆತ್ತವರಿಗೆ ಮಗು ಏನು ಮಾಡುತ್ತಿದೆ ಎನ್ನುವುದು ಗಮನಿಸುವಂತೆ ಸೌಲಭ್ಯ ಕಲ್ಪಿಸಲಾಗಿದೆ.

ತೊಟ್ಟಿಲಿನಲ್ಲಿರುವ ಮಗು ಅಳುವುದನ್ನು ನಿಲ್ಲಿಸದೇ ಇದ್ದರೆ ಕೂಡ ಹೆತ್ತವರಿಗೆ ಸಂದೇಶ ತಲುಪುತ್ತದೆ. ತೊಟ್ಟಿಲಿನಲ್ಲಿ ಕ್ಯಾಮರಾ ಕೂಡ ಇದ್ದು ಮಗುವಿನ ಚಲನವಲನಗಳನ್ನು ಹೆತ್ತವರು ಗಮನಿಸಬಹುದಾಗಿದೆ. ಸುಮಾರು ಒಂದು ತಿಂಗಳ ಸತತ ಪ್ರಯತ್ನದ ಬಳಿಕ ಈ ತೊಟ್ಟಿಲು ಅಭಿವೃದ್ಧಿಗೊಂಡಿದ್ದು, ನಮಗೆ ಶೇ 80 ಯಶಸ್ಸು ದೊರೆತಿದೆಯಾದರೂ ಈ ಸಾಧನದಲ್ಲಿ ಇನ್ನೂ ಹಲವಾರು ಸುಧಾರಣೆಗಳನ್ನು ತರಲು ಬಾಕಿಯಿದೆ ಎಂದು ತಂಡದ ಸದಸ್ಯರು ಹೇಳುತ್ತಾರೆ.
ಕಾಲೇಜಿನ ಸಹ ಪ್ರಾಧ್ಯಾಪಕಿ ಜಯಶ್ರೀ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ವರದರಾಜ ಭಟ್, ಸುಪರ್ಣಾ ಪೈ, ಸ್ನೇಹಾ ಎಚ್. ಭಟ್, ವರುಣ್ ಶೆಣೈ ಈ ತೊಟ್ಟಿಲನ್ನು ರೂಪಿಸಿದ್ದಾರೆ.
ಈ ಬಗ್ಗೆ 'ಒನ್ ಇಂಡಿಯಾ' ಜೊತೆ ಅಭಿಪ್ರಾಯ ವ್ಯಕ್ತಪಡಿಸಿದ ವರದ್‍ರಾಜ್, "ನಮಗೆ ಯಾವುದೇ ಕಂಪೆನಿ ತೊಟ್ಟಿಲು ಮಾಡಿಕೊಡಲು ಅನುಮತಿ ನೀಡಿದರೆ ನಾವು ಕಂಪೆನಿಗೆ ತೊಟ್ಟಿಲು ಮಾಡಿಕೊಡುತ್ತೇವೆ. ಅಥವಾ ನಾವೇ ಆ ಕಂಪೆನಿಗಳಲ್ಲಿ ಕೆಲಸ ಮಾಡಲು ಸಿದ್ದ. ಈ ಮೂಲಕ ಪ್ರತಿಯೊಂದು ಮಗುವಿಗೆ ಮೊದಲ ಆಸರೆಯಾಗುತ್ತೆ'' ಎನ್ನುತ್ತಾರೆ.
ತೊಟ್ಟಿಲು ಬೇಕಾದಲ್ಲಿ ಈ ನಂಬರಿಗೆ ಸಂಪರ್ಕಿಸಿ:
ಈ ತೊಟ್ಟಿಲಿಗೆ 7 ಸಾವಿರದಿಂದ 8 ಸಾವಿರ ಬೆಲೆಬಾಳುತ್ತದೆ. ಬೇಕಾದಲ್ಲಿ ವರದ್‍ರಾಜ್ ಅವರ ಮೊ. 8550852228 ಗೆ ಕರೆ ಮಾಡಬಹುದು.












Click it and Unblock the Notifications