ಮಂಗಳೂರು : ಆಟೋ ದರ ಇಳಿಕೆ, ಡಿಸಿ ಸಮರ್ಥನೆ
ಮಂಗಳೂರು, ಫೆ.2 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿರುವ ತಮ್ಮ ನಿರ್ಧಾರವನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸಮರ್ಥಿಸಿಕೊಂಡಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ದರ ಇಳಿಕೆ ಮಾಡಿರುವುದು ಸರಿಯಾದ ನಿರ್ಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಇಳಿಕೆ ಹಿನ್ನೆಲೆಯಲ್ಲಿ ಬಸ್ ಮತ್ತು ಆಟೋ ಪ್ರಯಾಣ ದರಗಳನ್ನು ಹೆಚ್ಚಿಸಿ ಹಿಂದೆ ಮಾಡಿದ್ದ ಆದೇಶವನ್ನು ಹಿಂದಕ್ಕೆ ಪಡೆದ್ದಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ದರ ಇಳಿಕೆ ಮಾಡಿರುವ ಬಗ್ಗೆ ಸಚಿವರು ಅಥವಾ ಕೋರ್ಟ್ ಮಾಹಿತಿ ಕೇಳಿದರೆ ನೀಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. [ಆಟೋ ಮುಷ್ಕರ ಬಿಜೆಪಿ ಅಸಮಾಧಾನ]

ಮುಂಬೈನಲ್ಲಿ ಆರಂಭಿಕ ದೆ 1.5 ಕಿ.ಮೀ.ಗೆ 17 ರೂ., ಕಾಸರಗೋಡಿನಲ್ಲಿ ಮೊದಲ 1.5 ಕಿ.ಮೀ.ಗೆ 20 ರೂ., ಚೆನ್ನೈನಲ್ಲಿ 1.8 ಕಿ.ಮೀ.ಗೆ 25 ರೂ., ಮೈಸೂರಿನಲ್ಲಿ 1.9 ಕಿ.ಮೀ.ಗೆ 25 ರೂ., ದರವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. [ಮಂಗಳೂರು : ಗುರುವಾರವೂ ರಸ್ತೆಗಿಳಿಯದ ಆಟೋಗಳು]
ಬೆಳಗಾವಿ ಹಾಸನ, ಮಡಿಕೇರಿ, ಧಾರವಾಡ, ಶಿವಮೊಗ್ಗದಲ್ಲೂ 20 ರೂ.ಗಿಂತ ಹೆಚ್ಚು ದರವಿಲ್ಲ. ಉಡುಪಿಯಲ್ಲಿ ಮಾತ್ರ 1.5 ಕಿ.ಮೀ.ಗೆ 25 ರೂ. ಹಾಗೂ ನಂತರದ ಪ್ರತಿ ಕಿ.ಮೀ.ಗೆ 16 ರೂ. ನಿಗದಿ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಮೊದಲು ದರ ಏರಿಕೆ ಮಾಡಿದ್ದು ಇಲ್ಲಿ, ಹಾಗೆಯೇ ಇಳಿಕೆ ಕೂಡಾ ಮಾಡಿದ್ದೇವೆ ಎಂದು ಹೇಳಿದರು.
ಆಟೋ ದರವನ್ನು ಕಡಿಮೆ ಮಾಡಲು ನ್ಯಾಯಾಲಯದಿಂದ ಯಾವುದೇ ಆದೇಶ ಅಥವಾ ತಡೆಯಾಜ್ಞೆ ಬಂದಿಲ್ಲ. ಕೆಲವರು ಇಂತಹ ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ಹೇಳಿದರು. ಮಂಗಳೂರಿನಲ್ಲಿ ಎರಡು ದಿನಗಳ ಆಟೋ ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಯಾರೂ ದೂರು ನೀಡಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿವಾದವೇನು? : ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಜ. 12ರಂದು ಆಟೋ ರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಆಟೋದಲ್ಲಿ ಕನಿಷ್ಠ ದರದಲ್ಲಿ 5 ರೂ. ಕಡಿಮೆ ಮಾಡಲಾಗಿದೆ. ರೂ.25 ಇದ್ದ ದರವನ್ನು 20 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇದಕ್ಕೆ ಆಟೋ ಚಾಲಕರು ಅಸಮಾಧಾನ ವ್ಯಕ್ತಪಡಿಸಿ ಕಳೆದ ಬುಧವಾರ ಮತ್ತು ಗುರುವಾರ ಆಟೋ ಸೇವೆಯನ್ನು ಸ್ಥಗಿತಗೊಳಿಸಿದ್ದರು.












Click it and Unblock the Notifications