ಮಂಗಳೂರು; ಪೌರ ಕಾರ್ಮಿಕನ ಮೇಲೆ ಹಲ್ಲೆ; ಕಸ ಸಂಗ್ರಹ ಬಂದ್
ಮಂಗಳೂರು, ಮಾರ್ಚ್ 16; ಮಂಗಳೂರು ನಗರದಲ್ಲಿ ಕಸ ಸಂಗ್ರಹವನ್ನು ಸ್ಥಗಿತಗೊಳಿಸಿ ಪೌರ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಕಸ ಸಾಗಿಸುವ ವಾಹನದ ಚಾಲಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದರು.
ಮಂಗಳವಾರ ಬೆಳಗ್ಗೆ ಕಂಕನಾಡಿ ಮಾರುಕಟ್ಟೆ ಬಳಿ ಕಸ ಸಂಗ್ರಹ ಮಾಡುವ ವ್ಯಕ್ತಿ ಮೇಲೆ ಆಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪನಿ ಸೂಪರ್ ವೈಸರ್ ಹಲ್ಲೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಕಸ ಸಂಗ್ರಹಣೆ ವಾಹನದ ಚಾಲಕ ಹೋಗಿದ್ದ.
ಆಗ ಸೂಪರ್ ವೈಸರ್ ಚಾಲಕನ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಇದನ್ನು ಖಂಡಿಸಿ ಪೌರ ಕಾರ್ಮಿಕರು ದಿಢೀರ್ ಪ್ರತಿಭಟನೆ ಆರಂಭಿಸಿದರು. ನಗರದಲ್ಲಿನ ಕಸ ಸಂಗ್ರಹವನ್ನು ತಕ್ಷಣ ಸ್ಥಗಿತಗೊಳಿಸಿದರು. ಸೂಪರ್ ವೈಸರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸೂಪರ್ ವೈಸರ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ತನಕ ಕಸ ಸಂಗ್ರಹ ಮಾಡುವುದಿಲ್ಲ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ. ನಗರದಲ್ಲಿ ಇಂದು ಮನೆಗಳಿಂದ ಕಸ ಸಂಗ್ರಹ ಮಾಡಿಲ್ಲ.
ಉಡುಪಿಯಲ್ಲಿ ಹಲ್ಲೆ ನಡೆದಿತ್ತು; ಕಳೆದ ವಾರ ಉಡುಪಿಯಲ್ಲಿ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆದಿತ್ತು. ಈ ಕುರಿತು ಉಡುಪಿ ನಗರಸಭೆ ಕಚೇರಿಯಲ್ಲಿ ನಗರಸಭೆ ಅಧ್ಯಕ್ಷರ ಅದ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಲಾಗಿತ್ತು.
ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಯಾವುದೇ ರೀತಿಯಲ್ಲೂ ಆರೋಪಿಗಳ ರಕ್ಷಣೆಗೆ ನಿಲ್ಲುವುದಿಲ್ಲ ಎಂಬ ಖಂಡನಾ ನಿರ್ಣಯವನ್ನೂ ಅಂಗೀಕರಿಸಲಾಗಿತ್ತು.












Click it and Unblock the Notifications