ಬಿಜೆಪಿಗೆ ಬಿಗ್ ಶಾಕ್: ಬಿಎಸ್‌ವೈ ಮನವೊಲಿಕೆಗೂ ಒಪ್ಪದ ಅರುಣ್ ಕುಮಾರ್ ಪುತ್ತಿಲ, ಕಣದಲ್ಲಿ ಮುಂದುವರಿದ ಹಿಂದೂ ಮುಖಂಡ
ಮಂಗಳೂರು, ಏಪ್ರಿಲ್ 24: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಳಿದ್ದಾರೆ. ಹಿಂದೂತ್ವದ ಪ್ರಯೋಗ ಶಾಲೆ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಬಿಜೆಪಿಗೆ ಬಿಸಿತುಪ್ಪವಾಗಿದೆ.
ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಬಿಜೆಪಿ ಮುಖಂಡರ ಮನವೊಲಿಕೆಗೆ ಒಪ್ಪದ ಅರುಣ್ ಕುಮಾರ್ ಪುತ್ತಿಲ ಈ ಬಾರಿ ಸ್ಪರ್ಧಿಸಿಯೇ ಸಿದ್ಧ ಎಂದಿದ್ದಾರೆ.

ಇನ್ನು ಮಾಜಿ ಸಿಎಂ ಯಡಿಯೂರಪ್ಪ ಕೂಡ ಅರುಣ್ ಕುಮಾರ್ ಪುತ್ತಿಲಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ಹಿರಿಯರು ಕೊನೆಯ ಕ್ಷಣದಲ್ಲಿ ಸಂಪರ್ಕ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ನಾನು ನಿರ್ಧಾರ ಮಾಡಲು ಆಗಲ್ಲ. ಕಾರ್ಯಕರ್ತರ, ಸಂಘದ ಹಿರಿಯರ ಸೂಚನೆ ಮೇರೆ ಸ್ಪರ್ಧೆ ಮಾಡುತ್ತಿದ್ದೇನೆ' ಎಂದಿದ್ದಾರೆ.
ಈ ಸಂಧರ್ಭದಲ್ಲಿ ನನ್ನ ಕೈಯಲ್ಲಿ ಏನೂ ಇಲ್ಲ. ಕಾರ್ಯಕರ್ತರ ನಿರ್ಧಾರವನ್ನು ಪಾಲಿಸುತ್ತೇನೆ. ಅರುಣ್ ಸಿಂಗ್, ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಣ್ಣಾ ಮಲೈ ಕರೆ ಮಾಡಿದ್ದಾರೆ. ಅವರಿಗೆ ನನ್ನ ಸ್ಪಷ್ಟ ನಿರ್ಧಾರ ವನ್ನು ಹೇಳಿದ್ದೇನೆ. ಭಗವಾ ಧ್ವಜವನ್ನು ಗುರುವಿನ ಸ್ಥಾನದಲ್ಲಿ ಇಟ್ಟು ಬದುಕುತ್ತಿದ್ದೇನೆ. ಹಿರಿಯರ ತಪ್ಪು ನಿರ್ಧಾರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತಾಗಿದೆ ಎಂದು ಹೇಳಿದರು.

ಮಾತು ಮುಂದುವರಿಸಿದ ಅರುಣ್ ಕುಮಾರ್ ಪುತ್ತಿಲ ಅಧಿಕಾರಗೋಸ್ಕರ ನಾನು ಅಪೇಕ್ಷೆ ಪಟ್ಟಿಲ್ಲ. ಅಧಿಕಾರಕ್ಕಾಗಿ ಅವರ ಹಿಂದೆ ಹೋದರೆ ಯಾವಾಗಲೂ ಅಧಿಕಾರ ಸಿಗುತಿತ್ತು. ಈ ಕ್ಷೇತ್ರದ ಸ್ಪರ್ಧೆ ಮಾಡಲು ನನ್ನ ಅಪೇಕ್ಷೆ ಇರಲಿಲ್ಲ. ಸಂಘ ಕಾರ್ಯಕರ್ತರ ನಿರ್ಧಾರದಂತೆ ಚುನಾವಣೆಗೆ ನಿಂತಿದ್ದೇನೆ. ಸಚ್ಚಾರಿತ್ರ್ಯದ ರಾಜಕಾರಣ ಮಾಡಿ, ಅಭಿವೃದ್ಧಿ ಜೊತೆಗೆ ಪುತ್ತೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮಗನಾಗಿ ಸ್ವೀಕಾರ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಕ್ಷೇತ್ರದ ಜನ ಆರಿಸಿ ಕಳುಹಿಸುವ ವಿಶ್ವಾಸ ಇದೆ. ನಿಮ್ಮ ಪ್ರೀತಿ ಆದರಗಳಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಮತದಾರರಿಗೆ ಅರುಣ್ ಕುಮಾರ್ ಪುತ್ತಿಲ ಭರವಸೆ ನೀಡಿದ್ದಾರೆ.












Click it and Unblock the Notifications