ಮಂಗಳೂರು: ಆಯತಪ್ಪಿ ಹಳ್ಳಕ್ಕೆ ಬಿದ್ದು ಯುವಕರ ದಾರುಣ ಸಾವು
ಮಂಗಳೂರು, ಜುಲೈ 31: ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳೂರು ನಗರದ ಎಕ್ಕೂರು ಸಮೀಪದ ಅಳಪೆ ಪಡ್ಪು ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ಅಳಪೆ ನಿವಾಸಿ ವರುಣ್ (27), ಎಕ್ಕೂರು ನಿವಾಸಿ ವೀಕ್ಷಿತ್ (28) ಮೃತ ಯುವಕರು ಎಂದು ಗುರುತಿಸಲಾಗಿದೆ.
ಮೃತ ವರುಣ್ ಹಾಗೂ ವೀಕ್ಷಿತ್ ಭಾನುವಾರ ಸಂಜೆ 5 ಗಂಟೆಗೆ ಗೆಳೆಯರ ಜೊತೆ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ಹಳ್ಳದ ದಡದಲ್ಲೇ ಕುಳಿತ್ತಿದ್ದರೆ, ಉಳಿದವರು ಕ್ರಿಕೆಟ್ ಮೈದಾನಕ್ಕೆ ಹೋಗಿದ್ದರು. ಇವರಿಬ್ಬರನ್ನು ಆಟವಾಡಲು ಬರಲು ಒತ್ತಾಯಿಸಿದರೂ ಇವರು ಹೋಗಿರಲಿಲ್ಲ ಎನ್ನಲಾಗಿದೆ.

ಇದಾದ ಕೆಲವೇ ಹೊತ್ತಿನಲ್ಲಿ ಹಳ್ಳದ ದಡದಲ್ಲಿ ಕುಳಿತಿದ್ದ ವರುಣ್ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಗೆಳೆಯನನ್ನು ರಕ್ಷಿಸಲು ವೀಕ್ಷಿತ್ ಕೂಡ ಹಳ್ಳಕ್ಕೆ ಧುಮಿಕಿದ್ದಾರೆ. ಆದರೆ ದುರಾದೃಷ್ಟವಶಾತ್ ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿದ ಸ್ಥಳೀಯರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.

ಕಂಕನಾಡಿ ಟೌನ್ ಠಾಣಾ ವ್ಯಾಪ್ತಿಯ ಅಳಪೆ ಪಡ್ಪು ಎಂಬಲ್ಲಿ ರೈಲ್ವೆ ಕಾಮಗಾರಿ ಸಂಬಂಧ ತೆಗೆದಿದ್ದ ಹೊಂಡ ಮಳೆ ಬಂದು ನೀರು ತುಂಬಿದ್ದು, ಹೊಂಡದಲ್ಲಿ ಅತಿಯಾಗಿ ಹೂಳು ತುಂಬಿಕೊಂಡಿತ್ತು ಎನ್ನಲಾಗಿದೆ.
ಮೃತ ವರುಣ್ ಚಾಲಕನಾಗಿದ್ದು, ದೀಕ್ಷಿತ್ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು. ಮನೆಯ ಆಧಾರ ಸ್ತಂಭವಾಗಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಯುವಕರು ನೀರಿನಲ್ಲಿ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಮನೆಯವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಮೃತದೇಹ ಹೊರಕ್ಕೆ ತೆಗೆಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.












Click it and Unblock the Notifications