ಯುವ ಕಾಂಗ್ರೆಸ್ ಬಂಡಾಯದ ನಡುವೆ ಮೂಡಬಿದ್ರೆಯಲ್ಲಿ ಜೈನ್ ನಾಮಪತ್ರ
ಮಂಗಳೂರು ಏಪ್ರಿಲ್ 20: ಮೂಲ್ಕಿ ಮೂಡುಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಮುಖಂಡರ ಬಂಡಾಯದ ನಡುವೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಅಭಯಚಂದ್ರ ಜೈನ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನೂರಾರು ಬೆಂಬಲಿಗರೊಂದಿಗೆ ಮೂಡುಬಿದ್ರೆ ತಾಲೂಕು ಕಚೇರಿಗೆ ಆಗಮಿಸಿದ ಅಭಯಚಂದ್ರ ಜೈನ್ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಿಂದ ಸತತ 5ನೇ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ಅಭಯಚಂದ್ರ ಜೈನ್, ಇಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದ ಜೈನ್, ಮೂಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ಯುವಕರಿಗೆ ಅವಕಾಶ ನೀಡಿದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದರು. ಕ್ಷೇತ್ರದಲ್ಲಿ ನಡೆದ ಎಲ್ಲಾ ಸಣ್ಣಪುಟ್ಟ ಕಾರ್ಯಕ್ರಮ, ಕೋಲ, ನೇಮ, ಕೋಳಿ ಅಂಕ ಸೇರಿದಂತೆ ಬ್ರಹ್ಮಕಲಶ, ಚರ್ಚ್‌ಗಳ ವಾರ್ಷಿಕೋತ್ಸವ, ಉರುಸ್, ಸತ್ಯನಾರಾಯಣ ಪೂಜೆಯವರೆಗೆ ಎಲ್ಲ ಕಾರ್ಯಕ್ರಮಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ಷೇತ್ರದ ಮುಂದಿನ ಅಭ್ಯರ್ಥಿ ತಾನೇ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಶಾಸಕ ಆಭಯ ಚಂದ್ರ ಜೈನ್ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಐವನ್ ಡಿಸೋಜಾ ಹಾಗೂ ಮಿಥುನ್ ರೈ ಟಿಕೆಟ್ ಗಿಟ್ಟಿಸುವ ಪ್ರಯತ್ನಕ್ಕೆ ತಣ್ಣಿರೆರೆಚಿದರು. ಐವನ್ ಡಿಸೋಜಾ ಕೊನೆಯವರೆಗೂ ಟಿಕೆಟ್ ಗಾಗಿ ಹೋರಾಟ ನಡೆಸಿಯೂ ಫಲ ಸಿಗಲಿಲ್ಲ.
ಈ ನಡುವೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಮುಖಂಡರು ಪಕ್ಷದ ವಿರುದ್ದ ಬಂಡಾಯವೆದ್ದಿದ್ದಾರೆ. 80 ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಎಲ್ಲಾ ಬಂಡಾಯ ,ಗೊಂದಲಗಳ ನಡುವೆ ಗುರುವಾರ ಅಭಯಚಂದ್ರ ಜೈನ್ ಮೂಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಕೈ ಪಾಳಯದಲ್ಲಿ ಆರಂಭವಾಗಿರುವ ಈ ತಳಮಳಗಳು ಮುಂಬರುವ ಚುನಾವಣೆಯ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications