ಭೀಕರ ರೈಲು ಅಪಘಾತ ತಡೆದ ವೃದ್ಧೆ: ರೈಲ್ವೆ ಇಲಾಖೆಯಿಂದ ಭಾರೀ ಮೆಚ್ಚುಗೆ
ಮಂಗಳೂರು, ಏಪ್ರಿಲ್ 4: ಮಾರ್ಚ್ 21 ರಂದು ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರದಲ್ಲಿ ಸಂಭವಿಸುತ್ತಿದ್ದ ರೈಲು ಅಪಘಾತವನ್ನು ಮಂದಾರದ ನಿವಾಸಿ ಅಜ್ಜಿ ಚಂದ್ರಾವತಿ ತಪ್ಪಿಸಿದ್ದಾರೆ. ಚಂದ್ರಾವತಿ ತಮ್ಮ ಸಮಯ ಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಕಾಪಾಡಿದ್ದು, ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾರ್ಚ್ 21 ರಂದು ಮನೆಯ ಪಕ್ಕದ ರೈಲು ಹಳಿಗೆ ಮರ ಬಿದ್ದಿರುವುದನ್ನು ಗಮನಿಸಿದ 70 ವರ್ಷದ ಚಂದ್ರಾವತಿ, ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದನ್ನು ನೆನಪಿಸಿಕೊಂಡಿದ್ದಾರೆ. ಹೇಗಾದರೂ ಮಾಡಿ ಅಪಾಯ ತಡೆಯಬೇಕು ಎಂದುಕೊಂಡಿದ್ದ ಚಂದ್ರಾವತಿ ಅವರು ಕೂಡಲೇ ಮನೆಗೆ ಓಡಿ ಕೆಂಪು ಬಟ್ಟೆ ತಂದು ರೈಲು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ತತ್‌ಕ್ಷಣವೇ ಅಪಾಯ ಅರಿತು ತಕ್ಷಣ ಲೋಕೋ ಪೈಲೆಟ್ ರೈಲು ನಿಲ್ಲಿಸಿದ್ದು, ಸುಮಾರು ಅರ್ಧ ಗಂಟೆ ಬಳಿಕ ಮರ ತೆರವು ಮಾಡಲಾಗಿದೆ.

ತಮ್ಮ ಸಮಯ ಪ್ರಜ್ಞೆಯಿಂದ ಸಂಭವಿಸುತ್ತಿದ್ದ ಅಪಘಾತ ತಡೆದ ಚಂದ್ರವತಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಚಂದ್ರಾವತಿ ಅವರಿಗೆ ಮಂಗಳೂರು ರೈಲ್ವೆ ಪೊಲೀಸರು ಅಭಿನಂಧನೆ ಸಲ್ಲಿಸಿದ್ದಾರೆ. ಮಂಗಳೂರು ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಕೊಟ್ಟಾರಿ ತಂಡ ಚಂದ್ರಾವತಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.
ಆ ದಿನ ನಡೆದಿದ್ದೇನು? ರೋಚಕ ಕ್ಷಣ ಬಿಚ್ಚಿಟ್ಟ ಚಂದ್ರಾವತಿ
ಈ ಘಟನೆಯ ಬಗ್ಗೆ ಚಂದ್ರಾವತಿ ಅವರು ವಿವರಿಸಿದ್ದು. "ಆಗ ಸಮಯ ಮಧ್ಯಾಹ್ನ 2.15 ಆಗಿತ್ತು. ಊಟ ಮುಗಿಸಿ ಮಲಗಬೇಕು ಎಂದು ಕೋಣೆಯೊಳಗೆ ಹೋದ ಸಂದರ್ಬಧಲ್ಲಿ ಪರ್ವತವೇ ಕುಸಿದ ರೀತಿಯ ಸದ್ದು ಕೇಳಿಸಿತು. ಓಡಿ ಹೊರಗೆ ಬಂದು ನೋಡಿದಾಗ ಮನೆಯ ಪಕ್ಕದ ರೈಲ್ವೆ ಹಳಿಯ ಮೇಲೆ ಬೃಹದಾಕಾರದ ಮರ ಬಿದ್ದಿತ್ತು. ಅದನ್ನು ನೋಡಿದ ಕೂಡಲೇ ಗಂಟೆ 2.20ರ ವೇಳೆಗೆ ಮಂಗಳೂರಿನಿಂದ ಮುಂಬಯಿಗೆ ತೆರಳುವ ರೈಲು ಯಾವಾಗಲೂ ಅದೇ ಹಳಿಯಲ್ಲಿ ಚಲಿಸುವುದು ನೆನಪಾಯಿತು. ಆಗ ನನ್ನ ಬಳಿ ಐದು ನಿಮಿಷ ಸಮಯವಿತ್ತು.

ಇಂತಹ ಸಂದರ್ಭದಲ್ಲಿ ಏನು ಮಾಡುವುದು ಎಂದು ತೋಚಲಿಲ್ಲ. ಮಕ್ಕಳಿಗೆ ಕರೆ ಮಾಡಿದೆ. ಅಷ್ಟರಲ್ಲಾಗಲೇ ರೈಲಿನ ಶಬ್ಧ ಕೇಳಿಸಿತು. ಜೀವ ಕೈಯಲ್ಲಿ ಬಂದ ಅನುಭವ ಆಯಿತು. ಮತ್ತೆ ಹಳಿಯ ಕಡೆಗೆ ಓಡಿದೆ. ಓಡೋವಾಗ ಅಂಗಳದಲ್ಲಿ ಮಗನ ಬಟ್ಟೆಯನ್ನು ತೆಗೆದುಕೊಂಡು ಹೋದೆ. ಆ ಬಟ್ಟೆಯನ್ನೇ ಸುತ್ತಿ ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಬೀಸಿದೆ. ದೇವರ ದಯೆ ಲೋಕೋ ಪೈಲೆಟ್ ರೈಲು ನಿಧಾನ ಮಾಡಿದರು. ಹಲವರ ಪ್ರಾಣ ಉಳಿಯಿತು. ಆ ಬಳಿಕ ಮರ ತೆರವು ಮಾಡಿ ರೈಲು ಮುಂಬೈ ಕಡೆ ತೆರಳಿದೆ" ಎಂದು ಚಂದ್ರಾವತಿ ಆ ರೋಚಕ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಸೂಕ್ತ ಸಮಯಕ್ಕೆ ರೈಲು ನಿಲ್ಲಿಸಿದ ಲೋಕೋ ಪೈಲೆಟ್ ಧನ್ಯವಾದ ತಿಳಿಸಿದರು.

ಚಂದ್ರಾವತಿ ಅವರ ಈ ಸಾಹಸದ ಬಗ್ಗೆ ಅವರ ಮಗ ನಿತಿನ್ ಕುಮಾರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. "ಅಮ್ಮ ಹೃದಯ ಸಂಬಂಧಿತ ರೋಗದಿಂದ ಬಲುತ್ತಿದ್ದಾರೆ. ಅಂದು ಅಮ್ಮ ಕರೆ ಮಾಡಿದಾಗ ನಾನು ಕೆಲಸದಲ್ಲಿದ್ದೆ. ಅಮ್ಮನ ಮಾತಿನಲ್ಲಿ ತುಂಬಾ ಭಯ ಕಾಣಿಸಿತು.ಕೆಲಸದ ಬಟ್ಟೆಯಲ್ಲೇ ಓಡೋಡಿ ಬಂದೆ. .ಅಷ್ಟರಲ್ಲಾಗಲೇ ಅಮ್ಮ ರೈಲು ನಿಲ್ಲಿಸಿದ್ದರು. ಬಳಿಕ ನಾವೆಲ್ಲಾ ಒಟ್ಟಾಗಿ ಮರವನ್ನು ಹಳಿಯಿಂದ ತೆರವುಗೊಳಿಸಿದೆವು.ಅಮ್ಮನ ಕ್ಷಮತೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ" ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications