ಮಂಗಳೂರಿಗೆ ಭರ್ಜರಿ ಕೊಡುಗೆ ಕೊಟ್ಟಿ ಸಚಿವ ಖಾದರ್
ಮಂಗಳೂರು, ಏ. 30 : ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನವನ್ನು ಮಂಗಳೂರು ಮತ್ತು ಉಳ್ಳಾಲದಲ್ಲಿ ಶೀಘ್ರವೇ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅಭಿಯಾನದಡಿ ಮಂಗಳೂರು ನಗರದ ಏಳು ಕಡೆಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನಕ್ಕೆ ಮಂಗಳೂರು ಹಾಗೂ ಉಳ್ಳಾಲದಲ್ಲಿ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ ಎಂದರು. ಇದರ ಅನ್ವಯ ಮಂಗಳೂರು ನಗರದಲ್ಲಿ 7 ಕಡೆಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಾಗೂ 3 ಕಡೆ ಈಗ ಇರುವ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. [ಯುಟಿ ಖಾದರ್ ಅವರಿಗೆ ಇದು ಬೇಸರದ ಸಂಗತಿ]
ಅಭಿಯಾನದಡಿ ಮಂಗಳೂರಿಗೆ 2.66 ಕೋಟಿ ಮತ್ತು ಉಳ್ಳಾಲಕ್ಕೆ 1.25 ಕೋಟಿ ಅನುದಾನ ಬಿಡುಗಡೆಯಾಗಿದೆ. ಮಂಗಳೂರಿನಲ್ಲಿ ಸುರತ್ಕಲ್, ಕುಂಜತ್ತಬೈಲ್, ಶಕ್ತಿನಗರ, ಪಡೀಲ್ ಮುಂತಾದ ಕಡೆ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಬ್ಬರು ವೈದ್ಯರು. ಮೂವರು ಎಎನ್ಎಂಗಳು, ಓರ್ವ ಲ್ಯಾಬ್ ಟೆಕ್ನಿಶಿಯನ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. ಚಿತ್ರಗಳು : Isaac Richard , Mangalore

9 ಹೆಲ್ತ್ ಕಿಯೋಸ್ಕ್ ಸ್ಥಾಪನೆ
ಸಂಚಾರಿ ವೈದ್ಯಕೀಯ ವಾಹನಗಳು ತಲುಪಲು ಸಾಧ್ಯವಿಲ್ಲದ ಮಂಗಳೂರಿನ 5 ಹಾಗೂ ಉಳ್ಳಾಲದ 4 ಕಡೆ ಆರೋಗ್ಯ ಸಹಾಯಕೇಂದ್ರಗಳನ್ನು (ಹೆಲ್ತ್ ಕಿಯೋಸ್ಕ್) ಸ್ಥಾಪಿಸಲಾಗುವುದು ಎಂದು ಹೇಳಿದರು.

ಮಂಗನಕಾಯಿಲೆ ತಡೆಗೆ ಕ್ರಮ
ಮಂಗನಕಾಯಿಲೆಯನ್ನು ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ 20,000 ಚುಚ್ಚುಮದ್ದುಗಳನ್ನು ಸರಬರಾಜು ಮಾಡಲಾಗಿದ್ದು 6,000 ಮಂದಿಗೆ ನೀಡಲಾಗಿದೆ. ಆದರೆ, ಸದ್ಯ ಇರುವ ಮಾರ್ಗಸೂಚಿಯಂತೆ 5 ವರ್ಷದೊಳಗಿನ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಂಗನ ಕಾಯಿಲೆ ನಿರೋಧಕ ಚುಚ್ಚುಮದ್ದು ನೀಡುವಂತಿಲ್ಲ. ಆದರೆ ಈ ವಯೋಮಿತಿಯವರಲ್ಲೂ ಕಾಯಿಲೆ ಕಂಡುಬಂದಿರುವುದರಿಂದ ಮರ್ಗಸೂಚಿ ತಿದ್ದುಪಡಿ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ಉಳ್ಳಾಲದಲ್ಲಿ ಡಾಟಾ ಸಂಗ್ರಹ
ಪ್ರತಿಯೊಂದು ಕುಟುಂಬಗಳ ಸದಸ್ಯರ ಆರೋಗ್ಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಅದನ್ನು ಡಾಟಾ ಸಂಗ್ರಹ ಕೇಂದ್ರದಲ್ಲಿ ಸಂಗ್ರಹಿಡಲಾಗುವುದು. ಉಳ್ಳಾಲದಲ್ಲಿ ಈ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ 20 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು. ಖಾಸಗಿ ಸಂಸ್ಥೆಗಳ ಸಹಕಾರದಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಯುಟಿ ಖಾದರ್ ಹೇಳಿದರು.

ಸಾಂತ್ವಾನ ಯೋಜನೆ
ಅಪಘಾತಗಳಾದ ಸಂದರ್ಭದಲ್ಲಿ ಸರ್ಕಾರದ ವೆಚ್ಚದಲ್ಲಿ ತುರ್ತು ವೈದ್ಯಕೀಯ ನೆರವು ನೀಡುವ ಮುಖ್ಯಮಂತ್ರಿ ಸಾಂತ್ವನ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಅಪಘಾತದ ತೀವ್ರತೆಯನ್ನು ಅನುಸರಿಸಿ 5,000, 15,000 ಹಾಗೂ 25,000 ರೂ ತುರ್ತು ನರೆವು ಈ ಯೋಜನೆಯಿಂದ ದೊರೆಯಲಿದೆ ಎಂದು ಎಂದು ಖಾದರ್ ಹೇಳಿದರು.

ತಾಲಿಬಾನ್ ಸಂಸ್ಕೃತಿ
ಶೃಂಗೇರಿಯಲ್ಲಿ ಎಎನ್‌ಎಫ್ ಸಿಬ್ಬಂದಿ ಗುಂಡಿಗೆ ಬಲಿಯಾದ ಕಬೀರ್ ಬಗ್ಗೆ ಶಾಸಕ ಸುನೀಲ್ ಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಲ್ಲಿ ಅನ್ಯಾಯವಾಗಿ ಕೊಲೆ ಮಾಡಿರುವ ಘಟನೆಯನ್ನು ಯಾರು ಕೂಡ ಸಮರ್ಥಿಸಿಕೊಳ್ಳಲಿ ಸಾಧ್ಯವಿಲ್ಲ. ಕೊಲೆಯನ್ನು ಸಮರ್ಥಿಸುತ್ತಿರುವ ಸುನಿಲ್ ಕುಮಾರ್ ಅವರು ತಾಲಿಬಾನ್ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಆರೋಪಿಸಿದರು.












Click it and Unblock the Notifications