ಬುದ್ಧಿಮಾಂದ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ
ಮಂಗಳೂರು, ಜುಲೈ 18: ಮೈಸೂರಿನ ಬುದ್ಧಿಮಾಂದ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಮೈಸೂರು ಹಾಗೂ ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಅಬಾನ್ (30) ಬಂಧಿತ ಆರೋಪಿ. ಮೈಸೂರು ಮೂಲದ ಒಂದೇ ಕುಟುಂಬದ ಮೂವರು ಬುದ್ಧಿಮಾಂದ್ಯ ಬಾಲಕಿಯರಿಗೆ ಅರೋಪಿ ಅಬಾನ್ ಸೇರಿದಂತೆ ಇನ್ನಿತರರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಬಾಲಕಿಯರ ಅಪಹರಣದ ಕುರಿತು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆ ನಂತರ ತನಿಖೆ ಆರಂಭಿಸಿದ ಮೈಸೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯರನ್ನು ಪತ್ತೆ ಹಚ್ಚಿದ ಬಳಿಕ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ತಲೆ ಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಮುಂದುವರೆಸಿದ್ದಾರೆ.

ಬಾಲಕಿಯರನ್ನು ಐವರು ಯುವಕರು ಅಪಹರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಒಂದೇ ಕುಟುಂಬದ ಬಾಲಕಿಯರನ್ನು ಪುಸಲಾಯಿಸಿ, ಕೆಲಸದ ಆಮಿಷ ತೋರಿಸಿ ಅಪಹರಿಸಿದ್ದರು. ಈ ಬಾಲಕಿಯರಿಗೆ ಬೆಂಗಳೂರು, ಮಂಡ್ಯ ಹಾಗೂ ಮಂಗಳೂರಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿ ಯುವಕರು ಮೈಸೂರು, ಮಂಗಳೂರು ಹಾಗೂ ಭಟ್ಕಳ ಮೂಲದವರು. ಬಾಲಕಿಯರನ್ನು ವೇಶ್ಯಾವಾಟಿಕೆ ಅಡ್ಡೆಗೆ ದೂಡಲು ಯತ್ನಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯರ ಅಪಹರಣದ ಕುರಿತು ಪೋಷಕರು ಮೈಸೂರಿನ ಒಡನಾಡಿ ಸಂಸ್ಥೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications