2017-18ನೇ ಸಾಲಿನ ಕಂಬಳ ನಡೆಯುವ ವೇಳಾಪಟ್ಟಿ ಪ್ರಕಟ
ಮಂಗಳೂರು, ಸೆಪ್ಟೆಂಬರ್ 25 : ತುಳುನಾಡಿನ ಜನಪದ ಕ್ರೀಡೆಯಾದ ಕಂಬಳ ನಡೆಯುವ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿದೆ. ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ನವೆಂಬರ್ 11, 2017ರಿಂದ 2018 ಮಾರ್ಚ್ 18ರ ವರಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಂಬಳ ನಡೆಯಲಿದೆ.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು ಅವರ ಅಧ್ಯಕ್ಷತೆಯಲ್ಲಿ 2017-18 ನೇ ಸಾಲಿನ ಕಂಬಳ ನಡೆಸುವ ಬಗ್ಗೆ ಮೂಡಬಿದ್ರೆಯಲ್ಲಿ ನಡೆದ ಸಭೆಯಲ್ಲಿ ಹಲವು ತೀರ್ಮಾನ ಕೈಗೊಳ್ಳಲಾಗಿದೆ.
ಕಂಬಳ ಸಮಿತಿಯ ಷರತ್ತುಗಳ ಪ್ರಕಾರ, ಕಂಬಳದ ಕೋಣಗಳಿಗೆ ಹಿಂಸೆ ನೀಡದಂತೆ ಕಂಬಳ ಆಯೋಜಿಸುವುದು .ಕಂಬಳದ ಕೋಣಗಳ ಕಿವಿ ಅಥವಾ ಯಾವುದೇ ಅಂಗಾಂಗಗಳನ್ನು ಊನ ಮಾಡುವಂತಿಲ್ಲ.

ಚುಚ್ಚಿ ಹೊಡೆದು ನೋವು ಮಾಡುವಂತಿಲ್ಲ. ಉರಿಯೂತ ಉಂಟು ಮಾಡುವ ಯಾವುದೇ ದ್ರಾವಣವನ್ನು ಕೋಣದ ಕಣ್ಣು ಅಥವಾ ಬೇರೆ ಯಾವುದೇ ಅಂಗಾಂಗಗಳಿಗೆ ಹಚ್ಚಿ ಓಡಿಸುವುದಕ್ಕೆ ನಿಷೇಧ ಹೇರಲಾಗಿದೆ.
ಕಂಬಳದ ಕೋಣಗಳಿಗೆ ಕ್ರಮಬದ್ಧ ಆಹಾರ ಶುದ್ಧ ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆ ಮಾಡುವುದು. ರಾಜ್ಯ ಸರ್ಕಾರದ ಆದೇಶದಂತೆ ಕಂಬಳ ಆಯೋಜಕರ ಖರ್ಚಿನಲ್ಲಿ ಸಂಪೂರ್ಣ ಕ್ರೀಡೆಯ ವಿಡಿಯೋಗ್ರಫಿ ಮಾಡಿ ಜಿಲ್ಲಾಧಿಕಾರಿಗೆ ನೀಡುವುದು.
ದೇಶಿ ತಳಿಗಳನ್ನು ಉಳಿಸಿ ಬೆಳೆಸಿದ ರೀತಿಯಲ್ಲಿ ಯಾವುದೇ ಹಿಂಸೆಗೆ ಅವಕಾಶ ನೀಡದೆ ಕಂಬಳವನ್ನು ಆಯೋಜಿಸುವ ಷರತ್ತುಗಳನ್ನು ಸಭೆಯಲ್ಲಿ ರೂಪಿಸಲಾಗಿದೆ.
ಕಂಬಳ ಕ್ರೀಡೆ ಗಿರುವ ಅಡೆತಡೆಗಳು ನಿವಾರಣೆಯಾಗಿ ಜನಪದ ಕ್ರೀಡೆ ಕಂಬಳ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಕಂಬಳದ ವಿರುದ್ಧ ಪ್ರಾಣಿ ದಯಾ ಸಂಘ ಪೆಟಾ ಮತ್ತೆ ತನ್ನ ಕ್ಯಾತೆ ತೆಗೆದಿದೆ. ಕಂಬಳದ ಕುರಿತು ಹೊರಡಿಸಿರುವ ಸುಗ್ರೀವಾಜ್ಞೆ ಅಸಿಂಧುಗೊಳಿಸುವಂತೆ ಸುಪ್ರೀಂ ಕೋರ್ಟಿಗೆ ಪೆಟಾ ಮನವಿ ಸಲ್ಲಿಸಿದೆ. ಇನ್ನು ಕಂಬಲ ನಡೆಯುವ ದಿನಾಂಕ ಈ ಕೆಳಗಿನಂತಿದೆ.
ಕಂಬಳ ವೇಳಾಪಟ್ಟಿ ಇಂತಿದೆ
11-11-17 ರಂದು ಮೂಡಬಿದಿರೆ, 19-11-17 ರಂದು ಪಿಲಿಕುಳ, 25-11-17 ರಂದು ಹೊಕ್ಕಾಡಿಗೋಳಿ, 03-12-17 ರಂದು ಕೊಟ್ಟಾರ ( ಮಂಗಳೂರು ), 09-12-17 ರಂದು ಬಾರಾಡಿ ಬೀಡು, 16-12-17 ರಂದು ವೇಣೂರು, 23-12-17 ರಂದು ಮೂಲ್ಕಿ, 31-12-17 ರಂದು ಸುರತ್ಕಲ್, 06-01-18 ರಂದು ಮಿಯ್ಯಾರು, 13-01-18 ರಂದು ಅಡ್ವೆ, 21-01-18 ರಂದು ಪುತ್ತೂರು, 27-01-18 ರಂದು ಐಕಳಬಾವ, 03-02-18ರಂದು ಕಟಪಾಡಿ, 10-02-18 ರಂದು ಜಪ್ಪಿನ ಮೊಗರು, 18-02-18 ರಂದು ವಾಮಂಜೂರು, 24-02-18 ರಂದು ಉಪ್ಪಿನಂಗಡಿ, 25-02-18 ರಂದು ಕಲ್ಲಾರು- ಬಾರ್ಕೂರು, 03-03-18 ರಂದು ಬಂಗಾಡಿ ಕೊಲ್ಲಿ, 10-03-18 ರಂದು ಕಕ್ಯಪದವು, 18-03-18 ರಂದು ತಲಪಾಡಿಯಲ್ಲಿ ಕಂಬಳ ನಡೆಯಲಿದೆ.












Click it and Unblock the Notifications