'ಗ್ರಾಮ ವಾಸ್ತವ್ಯದಲ್ಲಿ 1.24 ಕೋಟಿ ರುಪಾಯಿ ಖರ್ಚು ಮಾಡಿದ್ದೇ ಸಾಧನೆ'
Recommended Video
ಮಂಗಳೂರು, ಜೂನ್ 25: ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದಲ್ಲಿ ಒಂದು ಕೋಟಿ ಇಪ್ಪತ್ನಾಲ್ಕು ಲಕ್ಷ ಖರ್ಚು ಮಾಡಿದ್ದೇ ಸಾಧನೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿ ಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯದಿಂದ ಕುಮಾರಸ್ವಾಮಿ ಅವರು ಶೂನ್ಯಸಾಧನೆ ಮಾಡಿದ್ದಾರೆ. ಈ ಗ್ರಾಮ ವಾಸ್ತವ್ಯ ಸರಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಸಂಬಂಧವೇ ಇಲ್ಲದಂತಾಗಿದೆ. ಕುಮಾರಸ್ವಾಮಿ ಮೊದಲು ಜನರ ಸಮಸ್ಯೆಗಳನ್ನು ಆಲಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ ರಚಿಸುವುದು ಹಗಲುಗನಸು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹಗಲುಗನಸು ಕಂಡಿಲ್ಲ. ನಿಮಗೆ ಯಾಕೆ ಕೆಟ್ಟ ಕನಸು ಬೀಳುತ್ತಿದೆ? ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಹೇಳುತ್ತಾರೆ. ಸಿದ್ದರಾಮಯ್ಯ ಅಹಿಂದ ಜಪ ಮಾಡುತ್ತಾರೆ. ಇಡೀ ಸರಕಾರವೇ ಗೊಂದಲದಲ್ಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಗೋ ಸಾಗಾಟ ವಿಚಾರದ ಘರ್ಷಣೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಇದ್ದಾಗ ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ತಡೆ ಮಾಡಿದೆ. ರಾಷ್ಟ್ರಪತಿಗಳ ತಿದ್ದುಪಡಿಯನ್ನು ಕಾಂಗ್ರೆಸ್ ವಾಪಸ್ ಪಡೆದಿತ್ತು ಎಂದು ಹೇಳಿದ ಅವರು, ರಾಜ್ಯದಲ್ಲಿ ಸರಕಾರ ಗೋ ಹತ್ಯೆ ನಿಷೇಧ ಮಾಡಲಿ. ಬಿಜೆಪಿ ತಂದಿದ್ದ ತಿದ್ದುಪಡಿಯನ್ನು ಅನುಮೋದಿಸಲಿ ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ . ಐಎಂಎ ಹಗರಣದಲ್ಲಿ 90% ಮುಸ್ಲಿಮರಿಗೆ ಅನ್ಯಾಯವಾಗಿದೆ. 10 ಸಾವಿರ ಕೋಟಿಯ ಪಂಗನಾಮ ಹಾಕಲಾಗಿದೆ. ಮನ್ಸೂರ್ ಖಾನ್ ಗೆ ಬಿರಿಯಾನಿ ತಿನ್ನಿಸಿದವರು ಕಾಂಗ್ರೆಸ್ಸಿಗರು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಎಸ್ ಐಟಿಯಿಂದ ಪಾರದರ್ಶಕ ತನಿಖೆಯಾಗುವ ನಂಬಿಕೆಯಿಲ್ಲ. ಐಎಂಎ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಿ. ನಿಷ್ಪಕ್ಷಪಾತವಾದ ತನಿಖೆ ನಡೆಯಲಿ ಎಂದು ಅವರು ಹೇಳಿದರು.












Click it and Unblock the Notifications