Mandya: ಮಂಡ್ಯ ಕ್ಷೇತ್ರ ಜೆಡಿಎಸ್ ತೆಕ್ಕೆಗೆ, ಸುಮಲತಾ ಅವರ ನಡೆ ಏನು?
ಲೋಕಸಭಾ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಬಾಕಿ ಇರುವ 8 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಿದ್ದು, ಇನ್ನು 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಫೈನಲ್ ಮಾಡಬೇಕಿದೆ.
ಕೋಲಾರ, ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದು, ಸುಮಲತಾ ಅವರ ಟೆನ್ಷನ್ ಹೆಚ್ಚಿಸಿದ್ದಾರೆ.

ಮಂಡ್ಯ ಹಾಲಿ ಸಂಸದೆ ಸುಮಲತಾ ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ವಿಶ್ವಾಸ ಹೊಂದಿದ್ದರು. ಇನ್ನೂ ಬಿಜೆಪಿ ಸೇರಿಲ್ಲವಾದರೂ, ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಆದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಸುಮಲತಾ ಅವರಿಗೆ ದೊಡ್ಡ ತಲೆನೋವಾಯಿತು.
ಕಳೆದ ಚುನಾವಣೆಯಲ್ಲಿ ಭರ್ಜರಿ ಜಯ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು. ಸುಮಲತಾ 7,03,660 ಮತಗಳನ್ನು ಪಡೆದರೆ, ನಿಖಿಲ್ 5,77,784 ಮತ ಪಡೆದುಕೊಂಡಿದ್ದರು. 1,25,876 ಮತಗಳ ಅಂತರದಿಂದ ಗೆದ್ದಿದ್ದ ಸುಮಲತಾ, ಬಳಿಕ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು.
ಕಳೆದ ಚುನಾವಣೆ ಸೋಲಿನ ಕಹಿಯನ್ನು ಜೆಡಿಎಸ್ ಇನ್ನೂ ಮರತಿಲ್ಲ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಜೆಡಿಎಸ್ ಮಂಡ್ಯ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿತ್ತು, ಅದಕ್ಕೆ ಬಿಜೆಪಿ ನಾಯಕರು ಕೂಡ ಒಪ್ಪಿಗೆ ನೀಡುವ ಮೂಲಕ ಸುಮಲತಾ ಅವರಿಗೆ ಹಿನ್ನಡೆಯಾಗಿದೆ.
ಸುಮಲತಾ ಅವರಿಗೆ ಮಂಡ್ಯದಿಂದ ಟಿಕೆಟ್ ಸಿಗದೇ ಇದ್ದರೂ ಬೆಂಗಳೂರು ಉತ್ತರ ಅಥವಾ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗಳು ಇತ್ತು. ಆದರೆ ಈಗ ಈ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ಸುಮಲತಾ ಅವರಿಗೆ ಅವಕಾಶ ಟಿಕೆಟ್ ಸಿಗಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಯಾವುದೇ ಕಾರಣಕ್ಕೂ ಮಂಡ್ಯ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿರುವ ಸುಮಲತಾ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರ ಎನ್ನುವ ಕುತೂಹಲ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವುದು ಸುಲಭವಲ್ಲ.
ಕಾಂಗ್ರೆಸ್ ಪರವಾಗಿ ಸ್ಟಾರ್ ಚಂದ್ರು ಕಣಕ್ಕಿಳಿದರೆ, ಜೆಡಿಎಸ್ ಇನ್ನೂ ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಕಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಒಬ್ಬರು ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಇದ್ದರೆ, ಮತ್ತೊಬ್ಬರು ಜೆಡಿಎಸ್ ಶಾಸಕರಾಗಿದ್ದಾರೆ.
ಅಧಿಕೃತವಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾದ ಬಳಿಕ ಸುಮಲತಾ ಮುಂದಿನ ತೀರ್ಮಾನ ಮಾಡುವ ಸಾಧ್ಯತೆ ಇದೆ.












Click it and Unblock the Notifications