Sumalatha: ಬಿಜೆಪಿ-ಜೆಡಿಎಸ್ ಪಾದಯಾತ್ರೆ, ಸುಮಲತಾ ಏಕೆ ಪಾಲ್ಗೊಂಡಿಲ್ಲ!
ಮಂಡ್ಯ, ಆಗಸ್ಟ್ 08: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಗರಣ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ 'ಮೈಸೂರು ಚಲೋ' ಪಾದಯಾತ್ರೆ 6ನೇ ದಿನಕ್ಕೆ ಕಾಲಿಟ್ಟಿದೆ. ಕೆಲವು ನಾಯಕರ ಅಪಸ್ವರದ ಜೊತೆಗೆ ಪಾದಯಾತ್ರೆ ಮಂಡ್ಯದಲ್ಲಿ ಸಾಗುತ್ತಿದೆ. ಮೈಸೂರಿನಲ್ಲಿ ಆಗಸ್ಟ್ 10ರಂದು ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.
ಕಾಂಗ್ರೆಸ್ ಹಗರಣಗಳ ಸರ್ಕಾರದ ವಿರುದ್ಧದ ಮೈಸೂರು ಚಲೋ ಪಾದಯಾತ್ರೆಯು 5 ದಿನಗಳನ್ನು ಪೂರೈಸಿದೆ. ಬಿಜೆಪಿ, ಜೆಡಿಎಸ್ ನಾಯಕರು, ಕಾರ್ಯಕರ್ತರೊಂದಿಗೆ ಗುರುವಾರ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೂಬಿನಕೆರೆಯಲ್ಲಿ 6ನೇ ದಿನದ ಪಾದಯಾತ್ರೆಯನ್ನು ಆರಂಭಿಸಲಾಯಿತು. ಶಂಕ ಊದುವ ಮೂಲಕ ಇಂದಿನ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ.

ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ಸಾಗುತ್ತಿದೆ. ಆದರೆ ಮಂಡ್ಯದ ಮಾಜಿ ಸಂಸದೆ, ಬಿಜೆಪಿ ನಾಯಕಿ ಸುಮಲತಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಹಾಸನದ ಬಿಜೆಪಿ ನಾಯಕ, ಮಾಜಿ ಶಾಸಕ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಾರದು ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಸುಮಲತಾ ಏಕೆ ಪಾದಯಾತ್ರೆಯಿಂದ ದೂರವಾಗಿದ್ದಾರೆ? ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಲೋಕಸಭೆ ಚುನಾವಣೆ ಚಿತ್ರಣ: 2024ರ ಲೋಕಸಭೆ ಚುನಾವಣೆ ಬಳಿಕ ಮಂಡ್ಯದ ಚಿತ್ರಣ ಬದಲಾಯಿತೇ?. ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಕೈ ಸೇರಿತು. ಹಾಲಿ ಸಂಸದ ಸುಮಲತಾ ಕ್ಷೇತ್ರ ಬಿಟ್ಟುಕೊಡಬೇಕಾಯಿತು. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾದ ಎಚ್. ಡಿ. ಕುಮಾರಸ್ವಾಮಿ ಜಯಗಳಿಸಿ, ಕೇಂದ್ರ ಸಚಿವರು ಆದರು.
ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದರು. ಬಿಜೆಪಿ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿಯೇ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಿತ್ತು.
ಬಿಜೆಪಿ ಅಭ್ಯರ್ಥಿಯನ್ನೇ ಹಾಕದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಬೆಂಬಲಿಸಿತ್ತು. ಸುಮಲತಾ ಗೆದ್ದು ಬಂದರು. ಎಚ್. ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಆದರೆ 2024ರಲ್ಲಿ ಚಿತ್ರಣ ಸಂಪೂರ್ಣ ಬದಲಾಯಿತು.
ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರೂ ಸಹ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಯಿತು. ಎಚ್. ಡಿ. ಕುಮಾರಸ್ವಾಮಿ ಅಭ್ಯರ್ಥಿಯಾದರೂ ಸಹ ಸುಮಲತಾ ಪ್ರಚಾರಕ್ಕೆ ಹೋಗಲಿಲ್ಲ. ಆದರೆ 2 ಲಕ್ಷಕ್ಕೂ ಅಧಿಕ ಮತಗಳ ಲೀಡ್‌ನಲ್ಲಿ ಕುಮಾರಸ್ವಾಮಿ ಗೆದ್ದರು. ಈಗ ಪಾದಯಾತ್ರೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಒಟ್ಟಾಗಿ ಸಾಗುತ್ತಿದ್ದಾರೆ. ಆದರೆ ಸುಮಲತಾ ನಾಪತ್ತೆಯಾಗಿದ್ದಾರೆ.
ಮಾಜಿ ಸಂಸದೆ ಸುಮಲತಾ ಆಪ್ತರಾದ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಹಲವು ಬಿಜೆಪಿಯ ಸ್ಥಳೀಯ ನಾಯಕರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮಂಡ್ಯ ಸಂಸದ ಎಚ್. ಡಿ. ಕುಮಾರಸ್ವಾಮಿ ಸಹ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಆದರೆ ಸುಮಲತಾ ಗೈರು ಏಕೆ? ಎಂಬುದು ಎಲ್ಲರ ಪ್ರಶ್ನೆ.
ಮಂಡ್ಯ ಬಿಟ್ಟು ಹೋಗುವುದಿಲ್ಲ. ಅಧಿಕಾರ ಇಲ್ಲದಿರಲಿ, ಇರಲಿ ಮಂಡ್ಯದ ಜನರ ಜೊತೆ ಇರುತ್ತೇನೆ ಎಂದು ಸುಮಲತಾ ಹೇಳಿದ್ದರು. ಆದರೆ ಈಗ ಕ್ಷೇತ್ರದಲ್ಲಿಯೇ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದ್ದರೂ ಎರಡು ಪಕ್ಷಗಳ ನಾಯಕರು ಒಂದಾಗಿದ್ದರೂ ಸಹ ಸುಮಲತಾ ಮಾತ್ರ ಪಾದಯಾತ್ರೆಗೆ ಆಗಮಿಸಿಲ್ಲ.












Click it and Unblock the Notifications