ಅಪರಿಚಿತ ವಾಹನ ಡಿಕ್ಕಿ-ಹೆದ್ದಾರಿ ದಾಟುತ್ತಿದ್ದ ಜಿಂಕೆ ಸಾವು
ಮಂಡ್ಯ, ಜೂ.21: ಹೆದ್ದಾರಿ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ತಾಲೂಕಿನ ನಿಡಘಟ್ಟ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಜರುಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ, ಕೊಂಬಿನಕಲ್ಲು ಅರಣ್ಯಧಾಮದಿಂದ ಆಹಾರ ಅರಸಿ ವಲಸೆ ಬಂದಿದ್ದ ಜಿಂಕೆ ಗುಂಪಿನಿಂದ ದಾರಿತಪ್ಪಿತ್ತು. ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಹೆದ್ದಾರಿ ದಾಟುತ್ತಿದ್ದಾಗ ಅಪರಿಚಿತ ವಾಹನ ಜಿಂಕೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಜಿಂಕೆಯ ಕಾಲುಗಳಿಗೆ ತೀವ್ರ ಗಾಯಗಳಾಗಿತ್ತು.
ಈ ಮಾರ್ಗದಲ್ಲಿ ಬರುತ್ತಿದ್ದ ವಾಹನ ಸವಾರರು ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಗಾಯಗೊಂಡ ಜಿಂಕೆಯನ್ನು ಮದ್ದೂರು ಪಶು ವೈದ್ಯ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದೆ.

ಕೊಂಬಿನಕಲ್ಲು ಅರಣ್ಯಧಾಮದಿಂದ ಆಹಾರ ಅರಸಿ ಜಿಂಕೆಗಳ ಗುಂಪು ಚಂದಳ್ಳಿದೊಡ್ಡಿ ಗ್ರಾಮ ಸಮೀಪಕ್ಕೆ ಬಂದಿದ್ದವು. ಗುಂಪಿನಿಂದ ತಪ್ಪಿಸಿಕೊಂಡು ಬಂದು ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದೆ. ವಲಯ ಅರಣ್ಯಾಧಿಕಾರಿ ಮಹದೇವ, ಉಪ ವಲಯ ಅರಣ್ಯಾಧಿಕಾರಿಗಳಾದ ರವಿ, ರತ್ನಾಕರ್ ಹಾಗೂ ಸಿಬ್ಬಂದಿಗಳು ಸ್ಥಳೀಯ ವೈದ್ಯರ ಮರಣೋತ್ತರ ಪರೀಕ್ಷೆಯ ನಂತರ ಇಲಾಖೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.












Click it and Unblock the Notifications