Cauvery Aarti: ಗಂಗಾರತಿ ಮಾದರಿಯಲ್ಲಿ ಜೀವನದಿ ಕಾವೇರಿಗೆ ಆರತಿ, ಮುಹೂರ್ತಿ ನಿಗದಿ
ಮಂಡ್ಯ, ಸೆಪ್ಟೆಂಬರ್ 30: ಕರ್ನಾಟಕದ ಜೀವನದಿ ಕಾವೇರಿಗೆ 'ಗಂಗಾರತಿ' ಮಾದರಿಯಲ್ಲಿ 'ಕಾವೇರಿ ಆರತಿ' ನಡೆಯಲಿದೆ. ಉತ್ತರ ಪ್ರದೇಶದಲ್ಲಿ ನಡೆಯುವ 'ಗಂಗಾರತಿ' ಬಹಳ ಪ್ರಸಿದ್ಧಿ ಪಡೆದಿದೆ. ಇದೇ ಮಾದರಿಯಲ್ಲಿ ಕಾವೇರಿಗೆ ಆರತಿ ನಡೆಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಈ ವರ್ಷವೇ ಇದಕ್ಕೆ ಸಾಂಕೇತಿಕವಾಗಿ ಚಾಲನೆ ದೊರೆಯಲಿದ್ದು, ಅಕ್ಟೋಬರ್ 3ರಂದು ಮೊದಲ ಆರತಿ ಮಂಡ್ಯದಲ್ಲಿ ನಡೆಯಲಿದೆ. ಅಕ್ಟೋಬರ್ 4 ರಿಂದ 7 ವರೆಗೆ 2024ನೇ ಸಾಲಿನ ಶ್ರೀರಂಗಪಟ್ಟಣ ದಸರಾ ಮಹೋತ್ಸವ ನಡೆಯಲಿದೆ.
ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಗಂಗಾರತಿ ಮಾದರಿಯಲ್ಲಿ 'ಕಾವೇರಿ ಆರತಿ' ನಡೆಸಲು ಹರಿದ್ವಾರ ಮತ್ತು ವಾರಣಾಸಿಯಲ್ಲಿ ಅಧ್ಯಯನ ನಡೆಸಿತ್ತು. ಈ ಅಧ್ಯಯನ ವರದಿಯನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ನೀಡಿತ್ತು. ಈಗ ಕಾವೇರಿ ಆರತಿಯ ದಿನಾಂಕ ಹಾಗೂ ಸ್ಥಳ ಅಂತಿಮಗೊಳಿಸಲಾಗಿದೆ.

2024ರ ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ದಸರಾಗೂ ಮುನ್ನ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ತೀರದಲ್ಲಿ ಸಾಂಕೇತಿಕವಾಗಿ 'ಕಾವೇರಿ ಆರತಿ' ನಡೆಸಲಾಗುತ್ತದೆ. ಮೂಲ ಸೌಕರ್ಯಗಳ ವ್ಯವಸ್ಥೆ ಆದ ಬಳಿಕ ವಾರದಲ್ಲಿ 4-5 ದಿನ ಕಾವೇರಿಗೆ ಆರಿತ ಬೆಳಗಲಾಗುತ್ತದೆ.
ಕಾವೇರಿ ಆರತಿ: ಶಾಶ್ವತವಾಗಿ ಕಾವೇರಿ ನದಿಗೆ ಆರತಿ ಬೆಳಗಲು ಸ್ಥಳವನ್ನು ಅಂತಿಮಗೊಳಿಸಿ ಎಂದು ಡಿ. ಕೆ. ಶಿವಕುಮಾರ್ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದ ಸಭೆಯಲ್ಲಿ ಸೂಚನೆಯನ್ನು ನೀಡಿದ್ದಾರೆ. ಕಾವೇರಿ ನದಿ ತೀರದಲ್ಲಿ ಸ್ಥಳ ಅಂತಿಮಗೊಳಿಸಿದ ಬಳಿಕ ಮೂಲ ಸೌಕರ್ಯಗಳನ್ನು ಮಾಡಲು ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿ ನಡೆಸಲಾಗುತ್ತದೆ. ಇದಕ್ಕಾಗಿ ಹರಿದ್ವಾರ ಮತ್ತು ವಾರಣಾಸಿಗೆ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ನರೇಂದ್ರ ಸ್ವಾಮಿ, ಶಿವಲಿಂಗೇಗೌಡ, ರಮೇಶ್ ಬಂಡಿ ಸಿದ್ದೇಗೌಡ, ಉದಯ್ ಗೌಡ, ರವಿಕುಮಾರ್, ಬಾಲಕೃಷ್ಣ ಮಾಗಡಿ, ದರ್ಶನ್ ನಾರಾಯಣ್, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಸ್ಟಾರ್ ಚಂದ್ರು, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ನೇತೃತ್ವದ ನಿಯೋಗ ತೆರಳಿ ಅಧ್ಯಯನ ನಡೆಸಿತ್ತು.
ಗಂಗಾರತಿ ವೀಕ್ಷಣೆಗೆ ಸುಮಾರು 40 ಸಾವಿರಕ್ಕೂ ಅಧಿಕ ಜನರು ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ಇದೇ ಮಾದರಿಯಲ್ಲಿ ಕಾವೇರಿ ನದಿಗೆ ಆರತಿ ಬೆಳಗಲಾಗುತ್ತದೆ. ಇದನ್ನು ವೀಕ್ಷಣೆ ಮಾಡಲು ಜನರಿಗೆ ಅವಕಾಶ ಕಲ್ಪಿಸುವಂತೆ ಕಾವೇರಿ ನದಿ ತೀರದಲ್ಲಿ ಸ್ಥಳವನ್ನು ಗುರುತಿಸಿ, ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಹರಿದ್ವಾರ ಭೇಟಿ ಬಳಿಕ ಮಾತನಾಡಿದ್ದ ಸಚಿವ ಎನ್. ಚಲುವರಾಯಸ್ವಾಮಿ, "ಹರಿದ್ವಾರದ ಗಂಗಾರತಿಗೆ 108 ವರ್ಷದ ಇತಿಹಾಸವಿದ್ದು, ಕೋಪರೇಟಿವ್ ಆಕ್ಟ್ ಅಡಿ ಸೊಸೈಟಿ ಮಾಡಿ ಗಂಗಾರತಿ ನಡೆಸುತ್ತಿದ್ದಾರೆ. ಕಾಶಿಯಲ್ಲಿ ಟ್ರಸ್ಟ್ ಮೂಲಕ 35 ವರ್ಷಗಳಿಂದ ಗಂಗಾರತಿ ನಡೆಯುತ್ತಿದೆ" ಎಂದು ಹೇಳಿದ್ದರು.
"ಕನ್ನಡ ನಾಡಿನ ಜನತೆಯ ಜೀವನಾಡಿಯಾಗಿರುವ ಕಾವೇರಿಯನ್ನು ದೇವರ ರೂಪದಲ್ಲಿ ಪೂಜಿಸುತ್ತೇವೆ. ಭಾಗಂಡಲದಿಂದ ಹಿಡಿದು ವಿವಿಧ ಸ್ಥಳಗಳಲ್ಲಿ ಆರತಿ ಮಾಡುವ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು" ಎಂದು ಹೇಳಿದ್ದರು. ಸದ್ಯ ಸಾಂಕೇತಿಕವಾಗಿ ಅಕ್ಟೋಬರ್ 3ರಂದು 'ಕಾವೇರಿ ಆರತಿ' ನಡೆಯಲಿದೆ.
ಆರ್. ಅಶೋಕ ಪ್ರಶ್ನೆ ಮಾಡಿದ್ದರು: ಗಂಗಾರತಿ ವೀಕ್ಷಣೆಗೆ ಹರಿದ್ವಾರ ಮತ್ತು ವಾರಣಾಸಿಗೆ ಸಚಿವರ ನೇತೃತ್ವದ ನಿಯೋಗ ಭೇಟಿ ನೀಡಿದ್ದ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ ಪ್ರಶ್ನೆ ಮಾಡಿದ್ದರು. 'ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸುವ ಸಲುವಾಗಿ ಮಂಡ್ಯ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿರುವಾಗ ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಕಳುಹಿಸುತ್ತಿರುವುದು ಯಾತಕ್ಕೆ?' ಎಂದು ಪ್ರಶ್ನೆ ಮಾಡಿದ್ದರು.
'ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಹೋಗಬೇಕು ಎನ್ನುವುದಾದರೆ ಸಚಿವರು ತಮ್ಮ ತಂಡದೊಂದಿಗೆ ಅಲ್ಲಿ ಹೋಗಿ ಮಾಡಿದ್ದಾದರೂ ಏನು?. ಸರ್ಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡಲು ಹೋಗಿದ್ದಾ?. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ವೇಳೆ 30 ವರ್ಷ ಹಳೆ ಕೇಸುಗಳನ್ನ ರೀ ಓಪನ್ ಮಾಡಿ ಕರಸೇವಕರನ್ನ ಜೈಲಿಗೆ ಹಾಕಿದ್ದ ಈ ಕಾಂಗ್ರೆಸ್ ಸರ್ಕಾರ, ಗಣೇಶನ ಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸಿದ ಈ ಕಾಂಗ್ರೆಸ್ ಸರ್ಕಾರ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಯನ್ನ ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ತಿಪ್ಪೆ ಸಾರಿಸಿದ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ಹಿಂದೂ ಧರ್ಮದ ಬಗ್ಗೆ, ಹಿಂದೂಗಳ ಆಚಾರ-ವಿಚಾರದ ಬಗ್ಗೆ, ಸಂಪ್ರದಾಯ-ಪರಂಪರೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುವ ನಾಟಕ ಮಾಡುತ್ತಿದೆ' ಎಂದು ಅಶೋಕ ಆರೋಪಿಸಿದ್ದರು.
'ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ನಿಮಗೆ ನಿಜವಾಗಿಯೂ ದೇಶ-ಧರ್ಮದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಬ್ರದರ್ಸ್ ಗಳನ್ನ ಒದ್ದು ಒಳಗೆ ಹಾಕಿ, ನಾಗಮಂಗಲದಲ್ಲಿ, ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಎಬ್ಬಿಸಿದ ಬ್ರದರ್ಸ್ ಗಳನ್ನ ಒದ್ದು ಒಳಗೆ ಹಾಕಿ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ಪುಂಡಾಟಿಕೆ ಮಾಡಿದ ಬ್ರದರ್ಸ್ ಗಳನ್ನ ಒದ್ದು ಒಳಗೆ ಹಾಕಿ. ಅದು ಬಿಟ್ಟು ಬರೀ ತೋರಿಕೆಗೆ ಕಾವೇರಿ ಆರತಿ ಮಾಡುವ ನಾಟಕ ಮಾಡಿದರೆ ಆ ತಾಯಿ ಕಾವೇರಿ ಮೆಚ್ಚುತ್ತಾಳಾ?' ಎಂದು ಪ್ರಶ್ನೆ ಮಾಡಿದ್ದರು.












Click it and Unblock the Notifications