ಸಕ್ಕರೆ ನಾಡು ಮಂಡ್ಯದಲ್ಲಿ ಜಾನಪದ ಜಾತ್ರೆಯ ವೈಭವ, ಗಮನ ಸೆಳೆದ ಕಲಾತಂಡಗಳು
ಮಂಡ್ಯ, ಡಿಸೆಂಬರ್, 09: ಆಧುನಿಕತೆ ಭರದಲ್ಲಿ ನಶಿಸುತ್ತಿರುವ ಜಾನಪದ ಜಗತ್ತಿನ ಎಲ್ಲ ಪ್ರಕಾರಗಳನ್ನು ನಗರದ ನಾಗರಿಕರು ಕಣ್ತುಂಬಿಕೊಂಡರು. ವಿಶಿಷ್ಟ ಕಲೆಗಳ ಪ್ರದರ್ಶನಕ್ಕೆ ಮನಸೋತು ನಿಬ್ಬೆರಗಾದರು. ಜಾನಪದ ಕಲಾತಂಡಗಳ ಮೆರವಣಿಗೆ ಅಕ್ಷರಶಃ ಜನಪದ ಜಾತ್ರೆಯನ್ನಾಗಿಸಿತ್ತು.
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಹಾಗೂ ಜಿಲ್ಲಾ ಘಟಕದ ವತಿಯಿಂದ ಅಖಿಲಕ ಕರ್ನಾಟಕ ಜಾನಪದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ಬೀದಿಗಳಲ್ಲಿ ನಡೆದ ಜಾನಪದ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು. ಜನಮನ ಸೂರೆಗೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಕಲಾವಿದರ ತಂಡಗಳು, ಜಿಲ್ಲಾಧಿಕಾರಿಗಳ ಕಚೇರಿಯಂದ ತಮ್ಮ ಪ್ರದರ್ಶನವನ್ನು ತೋರಿದ್ದು, ವಿವಿಧ ರಸ್ತೆಗಳ ಮಾರ್ಗವಾಗಿ ವೇದಿಕೆಗೆ ಆಗಮಿಸಿದರು.
ದೇಶಿ ಕಲೆಗಳ ಅನಾವರಣ
ಜಾನಪದ ಜಾತ್ರೆಯಲ್ಲಿ ದೇಶಿ ಕಲೆಗಳು ಸುಂದರವಾಗಿ ಅನಾವರಣಗೊಳ್ಳುವುದರ ಮೂಲಕ ನಗರದ ಜನರಿಗೆ ವಿಶಿಷ್ಟ ಅನುಭವ ನೀಡಿದವು. ವಿವಿಧ ರಸ್ತೆಗಳ ಮೂಲಕ ಪ್ರದರ್ಶನ ನೀಡುತ್ತಾ ಸಾಗಿದ ಕಲಾವಿದರು, ಡಾ. ಬಿ.ಆರ್. ಅಂಬೇಡ್ಕರ್ ಭವನದೊಳಗೆ ಆಗಮಿಸಿದರು. ಈ ವೇಳೆ ಕಲೆಗಳು ಮತ್ತು ಕಲಾವಿದರ ಸಂಗಮವೇ ಮೇಳೈಸಿತ್ತು. ಒಂದಕ್ಕಿಂತ ಮತ್ತೊಂದು ಎನ್ನುವಂತೆ ಅದರದ್ದೇ ಆದ ಜಾನಪದ ಪ್ರಕಾರಗಳ ಕಲೆ ಪ್ರದರ್ಶಶಿದ ಕಲಾವಿದರು ಜನತೆಯನ್ನು ನಿಬ್ಬೆರಗುಗೊಳಿಸಿದರು.

ಜನರ ಮನಗೆದ್ದ ವಿವಿಧ ನೃತ್ಯಗಳು
ಮಂಡ್ಯದ ಪ್ರಮುಖ ಆಕರ್ಷಣೆಯಾದ ಪೂಜಾ ಕುಣಿತ, ಡೊಳ್ಳು ಕುಣಿತ ಗಮನ ಸೆಳೆಯಿತು. ಉಳಿದಂತೆ ಗೊರವರ ಕುಣಿತ, ಗೊರುಕಾನ ನೃತ್ಯ, ಚಿಟ್‌ಮೇಳ, ಕೋಲಾಟ, ಜಗ್ಗಲಿಗೆ ಮೇಳ, ಎಂ.ನಗಾರಿ, ಸುಗ್ಗಿ ಕುಣಿತ, ಹಗಲುವೇಷ, ಕೊರಣಿಗೆ ಭಾವನೃತ್ಯ, ಪುರುವಂತಿಕೆ ಮೇಳ, ಗೊಂದಲಿಗರ ಮೇಳ, ಹೆಜ್ಜೆಮೇಳ, ಕಂಸಾಳೆ, ಪೂಜಾಕುಣಿತ, ವೀರಭದ್ರನ ಕುಣಿತ, ಸೂತ್ರದ ಗೊಂಬೆ, ಗಾರುಡಿಗೊಂಬೆ ಗಮನ ಸೆಳೆದವು.

ವಿರಗಾಸೆ ಮೂಲಕ ಪುರವಂತರ ರೋಷಾವೇಶ, ಲಂಬಾನಿ ಮಹಿಳೆಯರಿಂದ ವಿಶಿಷ್ಟ ಹಾಡು ಕುಣಿತ, ಕೋಲಾಟ ಹಾಗೂ ಸೋಮನ ಕುಣಿತಗಳು ಜನರ ಮನಸ್ಸಿಗೆ ಮುದ ನೀಡಿದವು. ಕಹಳೆ, ಕಂಸಾಳೆ, ಜಗ್ಗಲಿಗೆ, ಡೊಳ್ಳು, ನಗಾರಿ, ತಮಟೆ, ಡೋಲು, ಕರಡಿ ಮಜಲು, ಚೌಡಿಕೆಗಳ ನಾದಗಳ ಮೂಲಕ ಜನರನ್ನು ರಂಜಿಸಿದರು. ಇನ್ನು ಗೀಗೀ ನೀಲಗಾರರ ಪದಗಳು ಮತ್ತು ಸೋಬಾನೆ ಪದಗಳು ಹೊಸ ಲೋಕವನ್ನೆ ಸೃಷ್ಟಿಸಿದ್ದವು. ಒಟ್ಟಾರೆ ಜಾನಪದ ಮೆರವಣಿಗೆ ನಾಗರೀಕರನ್ನು ಮಂತ್ರಮುಗ್ದರನ್ನಾಗಿಸುವಲ್ಲಿ ಯಶಸ್ವಿಯಾಯಿತು.












Click it and Unblock the Notifications