ಮಂಡ್ಯದಲ್ಲಿ ಮುನಿದ ಕೈ ನಾಯಕರ ಮನವೊಲಿಸಲು ಸಿದ್ದು ಅಖಾಡಕ್ಕೆ
Recommended Video

ಮಂಡ್ಯ, ಅಕ್ಟೋಬರ್ 24: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಜಂಟಿಯಾಗಿ ಪ್ರಚಾರ ಮಾಡುವ ಮೂಲಕ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿರುವುದಾಗಿ ಹೇಳುತ್ತಾ ಬರುತ್ತಿದ್ದರೂ ಅದು ಮಂಡ್ಯದಲ್ಲಿ ಸುಳ್ಳಾಗಿತ್ತು. ಜೆಡಿಎಸ್ ಸಮಾವೇಶ, ಪ್ರಚಾರ ಕಾರ್ಯಗಳಲ್ಲಿ ಕಾಂಗ್ರೆಸ್ ನಾಯಕರು ಗೈರು ಹಾಜರಾಗುವ ಮೂಲಕ ಅಸಮಾಧಾನವಿದೆ ಎನ್ನುವುದು ಹೊರನೋಟಕ್ಕೆ ಖಾತ್ರಿಯಾಗಿತ್ತು.
ಈ ಬೆಳವಣಿಗೆ ಮೈತ್ರಿ ಸರಕಾರದ ಮೇಲೆ ಪರಿಣಾಮ ಬೀರಿತ್ತಲ್ಲದೆ, ಇದನ್ನು ಬಿಜೆಪಿ ಸಮರ್ಪಕವಾಗಿ ಬಳಸಿಕೊಳ್ಳುವ ತೀರ್ಮಾನ ಮಾಡಿತ್ತು. ಕಾಂಗ್ರೆಸ್ ನ ಹಲವು ನಾಯಕರು ಒಂದಲ್ಲ ಒಂದು ಕಾರಣ ಕೊಟ್ಟು ಪ್ರಚಾರದಿಂದ ದೂರ ಉಳಿಯಲು ತೀರ್ಮಾನ ಮಾಡಿಕೊಂಡಿದ್ದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಪ್ರಭಾವಿ ನಾಯಕ ಚೆಲುವರಾಯಸ್ವಾಮಿ ಅವರು ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ, ಪ್ರಚಾರದಲ್ಲಿ ಕಾಣಿಸಿಕೊಳ್ಳದೆ ತಟಸ್ಥರಾಗಿದ್ದರು. ಇದೆಲ್ಲವನ್ನು ನೋಡಿದ ಜೆಡಿಎಸ್ ನಾಯಕರು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಾಂತರ ಒಂದು ಮಾಡುವ ಪ್ರಯತ್ನ ಮಾಡಿದರು.

ಚೆಲುವರಾಯಸ್ವಾಮಿ ಮನವೊಲಿಸಿದ ಸಿದ್ದು
ಚೆಲುವರಾಯಸ್ವಾಮಿ ಸೇರಿದಂತೆ ಹಲವು ನಾಯಕರ ಮನವೊಲಿಸಿ, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಸಲುವಾಗಿ ರಹಸ್ಯ ಸಭೆ ನಡೆಸಿದ್ದು, ಈ ಸಭೆಯಲ್ಲಿ ಚೆಲುವರಾಯಸ್ವಾಮಿ ಅವರ ಮನವೊಲಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ಅಂದಿಗೂ- ಇಂದಿಗೂ ಪ್ರತಿಸ್ಪರ್ಧಿಗಳೇ
ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರು ಒಂದು ಕಾಲದ ಚೆಲುವರಾಯಸ್ವಾಮಿ ಪ್ರತಿಸ್ಪರ್ಧಿಯಾಗಿದ್ದು, ಅವತ್ತು ಚೆಲುವರಾಯಸ್ವಾಮಿ ಅವರು ಜೆಡಿಎಸ್ ನಲ್ಲಿದ್ದಾಗ ಶಿವರಾಮೇಗೌಡರು ಕಾಂಗ್ರೆಸ್‌ನಲ್ಲಿದ್ದರು. ಈಗ ಚೆಲುವರಾಯಸ್ವಾಮಿ ಕಾಂಗ್ರೆಸ್‌ನಲ್ಲಿದ್ದರೆ, ಶಿವರಾಮೇಗೌಡರು ಜೆಡಿಎಸ್ ನಲ್ಲಿದ್ದಾರೆ. ಈಗಲೂ ರಾಜಕೀಯವಾಗಿ ಪ್ರತಿಸ್ಪರ್ಧಿಗಳೇ ಆಗಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆ ಮೇಲೆ ಪರಿಣಾಮ
ಚೆಲುವರಾಯಸ್ವಾಮಿ ಜೆಡಿಎಸ್ ಸಖ್ಯ ತೊರೆದ ಬಳಿಕ ಮತ್ತೆ ಅದೇ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಮನಸ್ಸು ಮಾಡುತ್ತಿಲ್ಲ. ಒಂದು ವೇಳೆ ಚೆಲುವರಾಯಸ್ವಾಮಿ ಅವರೇನಾದರೂ ತಟಸ್ಥರಾಗಿ, ತಮ್ಮ ಅಸಮಾಧಾನ ಹೊರಹಾಕಿದರೆ ಅದರ ಪರಿಣಾಮ ಮುಂದಿನ ಲೋಕಸಭಾ ಚುನಾವಣೆ ಮೇಲೆ ಬೀರಲಿದ್ದು, ಇದೆಲ್ಲವನ್ನು ಮನಗಂಡ ಸಿದ್ದರಾಮಯ್ಯ ಅವರು ಮಂಡ್ಯ ಕಾಂಗ್ರೆಸ್ ನಾಯಕರ ಮನವೊಲಿಸಿ ಪ್ರಚಾರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮಾಧ್ಯಮದವರನ್ನು ಹೊರಗಿಟ್ಟು ಮಾತುಕತೆ
ಮಾಧ್ಯಮದವರನ್ನು ಹೊರಗಿಟ್ಟು, ಮಂಡ್ಯ ನಗರದ ಕನಕ ಭವನದಲ್ಲಿ ಸಭೆ ನಡೆಸಿದ್ದು, ಕಾಂಗ್ರೆಸ್ ನ ಎಲ್ಲಾ ನಾಯಕರನ್ನು ಕರೆಯಿಸಿಕೊಂಡ ಸಿದ್ದರಾಮಯ್ಯ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರ ಗೆಲುವಿನ ಸಂಬಂಧ ಮಾತುಕತೆ ನಡೆಸಿ, ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications