ಕಾವೇರಿ ನೀರಿಗಾಗಿ ಶ್ರೀರಂಗಪಟ್ಟಣದಲ್ಲಿ ಚಡ್ಡಿ ಚಳವಳಿ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 15: ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳು ಗುರುವಾರ ಕರೆ ನೀಡಿದ್ದ ರೈಲ್ ರೋಕೋ ಚಳವಳಿಗೆ ಮಂಡ್ಯ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಡ್ಯ ನಗರದಲ್ಲಿ ಮಾತ್ರ ಕದಂಬ ಸೈನ್ಯ ಹೊರತುಪಡಿಸಿದರೆ ಉಳಿದ ಸಂಘಟನೆಗಳು ರೈಲು ನಿಲ್ದಾಣದ ಬಳಿ ಸುಳಿಯಲಿಲ್ಲ.

ಕದಂಬ ಸೈನ್ಯದ ಕಾರ್ಯಕರ್ತರು ರೈಲು ನಿಲ್ದಾಣದ ಒಳಗೆ ನುಗ್ಗಲು ಯತ್ನಿಸಿದರಾದರೂ ಪೊಲೀಸ್ ಸರ್ಪಗಾವಲು ಹಾಕಿದ್ದರಿಂದ ಸಾಧ್ಯವಾಗಲಿಲ್ಲ. ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಉಮ್ಮಡಹಳ್ಳಿ ನಾಗೇಶ್, ಯೋಗೇಶ್, ಮಹದೇವು, ಧಾಮೋಜಿರಾವ್ ಅವರನ್ನು ಪೊಲೀಸರು ಬಂಧಿಸಿದರು.[ಶಾಂತಿ ಕಾಪಾಡಲು ಅರ್ಜಿ, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್]

Rail rokho protest dull in Mandya

ಬಿಗಿ ಬಂದೋಬಸ್ತ್: ಮಂಡ್ಯ ನಗರ ರೈಲು ನಿಲ್ದಾಣ ಸೇರಿದಂತೆ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ 9 ನಿಲ್ದಾಣಗಳಲ್ಲೂ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಪ್ರತಿಭಟನಾಕಾರರು ಸುಳಿಯಲಿಲ್ಲ. ಮಂಡ್ಯ ನಗರ ರೈಲು ನಿಲ್ದಾಣದಲ್ಲಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

ರಾಜ್ಯ ಸಶಸ್ತ್ರ ಪೊಲೀಸರು, ಜಿಲ್ಲಾ ಸಶಸ್ತ್ರ ಪೊಲೀಸರು ಹಾಗೂ ರೈಲ್ವೆ ಸುರಕ್ಷತಾ ಪಡೆ, ಇಂಡೋ ಟಿಬೆಟ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಸೇರಿದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.[ಶುಕ್ರವಾರ ಶಾಸಕರ ತುರ್ತು ಸಭೆ ಕರೆದ ಮಾದೇಗೌಡ]

Rail rokho protest dull in Mandya

ರೈಲು ನಿಲುಗಡೆಗೆ ಅವಕಾಶ ನೀಡಿಲ್ಲ: ಉಳಿದ ರೈಲು ನಿಲ್ದಾಣಗಳಲ್ಲಿಯೂ ಇನ್ ಸ್ಪೆಕ್ಟರ್ ದರ್ಜೆಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಎಲ್ಲೂ ರೈಲು ನಿಲುಗಡೆಗೆ ಅವಕಾಶ ನೀಡಲಿಲ್ಲ.

2015ರಲ್ಲಿ ನಡೆದ ಕಾವೇರಿ ಹೋರಾಟದಲ್ಲಿ ಮಂಡ್ಯ ನಗರ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಹಲವು ಸಂಘಟನೆಗಳ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಹಾನಿಯುಂಟು ಮಾಡಿ ಕೋಟ್ಯಂತರ ರುಪಾಯಿ ನಷ್ಟ ಉಂಟುಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲ ಕಾರ್ಯಕರ್ತರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದು, ಇಂದಿಗೂ ಆ ಪ್ರಕರಣ ನಡೆಯುತ್ತಲೇ ಇದೆ.

ಜೊತೆಗೆ ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವುದರಿಂದ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಈ ವರೆಗೂ ಕೇಂದ್ರ ಸರ್ಕಾರ ವಾಪಸ್ ಪಡೆದಿಲ್ಲ. ಈ ಕಾರಣದಿಂದಾಗಿ ಸಂಘಟನೆಗಳ ಕಾರ್ಯಕರ್ತರು ರೈಲು ನಿಲ್ದಾಣದತ್ತ ಸುಳಿಯಲಿಲ್ಲ. ಇನ್ನು ರೈತ ಹಿತರಕ್ಷಣಾ ಸಮಿತಿಯವರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.[ಅಂಬರೀಶಣ್ಣ ರಸ್ತೆ ಬೇಡ, ನೀರು ಬೇಡ, ನೀವು ಬನ್ನಿ ಸಾಕು...]

Rail rokho protest dull in Mandya

ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹ: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಕಾವೇರಿ ಜಲ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಎರಡೂ ರಾಜ್ಯಗಳಿಗೂ ನ್ಯಾಯ ದೊರಕಿಸಬೇಕೆಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದರು.

ಈ ಹಿಂದೆ ಪ್ರಧಾನಿಗಳು ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯಗಳ ನಡುವೆ ಬಾಂಧವ್ಯವನ್ನು ಕಾಪಾಡಲು ಮಧ್ಯಪ್ರವೇಶ ಮಾಡಿ ನ್ಯಾಯ ಕೊಡಿಸಿದ ಉದಾಹರಣೆಗಳಿವೆ. ಆದರೆ, ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡಂದಿನಿಂದ ಪ್ರವಾಸದಲ್ಲಿದ್ದಾರೆಯೇ ಹೊರತು ಆಂತರಿಕ ವಿಚಾರಗಳ ಕುರಿತು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು. ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.[ತಮಿಳುನಾಡಿಗೆ ನೀರು ಬಿಡುವುದೊಂದೇ ದಾರಿ: ರಮೇಶ್ ಕುಮಾರ್]

Rail rokho protest dull in Mandya

ಪ್ರತಿಭಟನೆಗಿಳಿಯದ ಸಂಘಟನೆಗಳು: ಕಾವೇರಿ ಹೋರಾಟದ ಕಾವು ಗುರುವಾರ ತೀರಾ ಕಡಿಮೆಯಾದಂತೆ ಭಾಸವಾಗಿತ್ತು. ಯಾವುದೇ ಗ್ರಾಮಸ್ಥರು ಪ್ರತಿಭಟನೆಗಿಳಿಯಲಿಲ್ಲ. ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಮಾತ್ರ ಮುಂದುವರಿದಿತ್ತು.

ಉಳಿದಂತೆ ಗ್ರಾಮಸ್ಥರು, ಸಂಘಟನೆಗಳ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಯಾರೂ ಪ್ರತಿಭಟನೆಗೆ ಇಳಿಯಲಿಲ್ಲ. ಜಿ.ಮಾದೇಗೌಡ, ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್, ಎಂ.ಎಸ್.ಆತ್ಮಾನಂದ, ಜಿ.ಬಿ.ಶಿವಕುಮಾರ್, ಅಂಬುಜಮ್ಮ, ಅಮ್ಜದ್ ಪಾಷಾ ಎನ್. ರಾಜು, ಎಂ.ಎಸ್. ಸತ್ಯಾನಂದ, ಡಿ.ರಮೇಶ್, ಕೆ.ಎಸ್. ಸಚ್ಚಿದಾನಂದ ಮತ್ತಿತರರು ಭಾಗವಹಿಸಿದ್ದರು.

ಶ್ರೀರಂಗಪಟ್ಟಣದಲ್ಲಿ ಚಡ್ಡಿ ಮೆರವಣಿಗೆ : ಕಾವೇರಿ ಹೋರಾಟದ ಕಾವು ಶ್ರೀರಂಗಪಟ್ಟಣದಲ್ಲಿ ಹೆಚ್ಚಿದ್ದು, ಪಟ್ಟಣದಲ್ಲಿ ರೈತರು ಚಡ್ಡಿ ಮೆರವಣಿಗೆ ಮಾಡುವ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rail rokho protest dull in Mandya. Overall Thursday protest looks bit calm down. But, protest continued in Srirangapatna.
Please Wait while comments are loading...