ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಆರ್.ಪೇಟೆಯಲ್ಲಿ ಮಳೆ ಬಂದರೆ ಜನರಿಗೆ ಭಯವೋ ಭಯ!

By ಬಿಎಂ ಲವಕುಮಾರ್
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 14: ತಾಲೂಕು ಕೇಂದ್ರ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಳೆ ಬಂದರೆ ಜನಕ್ಕೆ ರೋಗದ ಭಯ ಕಾಡುತ್ತದೆ. ಇಲ್ಲಿನ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ತ್ಯಾಜ್ಯದೊಂದಿಗೆ ಶೇಖರವಾಗುವ ಮಳೆ ನೀರು ಹರಿದು ಹೋಗದೆ ಸೊಳ್ಳೆಯ ಆವಾಸ ಸ್ಥಾನವಾಗಿ ಮಾರ್ಪಟ್ಟು ಜನರಿಗೆ ಭಯ ಹುಟ್ಟಿಸುತ್ತದೆ.

ಸಾಮಾನ್ಯವಾಗಿ ಮಳೆ ಸ್ವಲ್ಪ ಜೋರಾಗಿ ಬಂದರೆ ಸಾಕು ಇಲ್ಲಿ ಒಂದಲ್ಲ ಒಂದು ರೀತಿಯ ಅನಾಹುತ ನಡೆದು ಬಿಡುತ್ತದೆ. ಜತೆಗೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸಂಗ್ರಹವಾಗುವ ನೀರು ಹರಿದು ಹೋಗದೆ ಹಲವು ದಿನಗಳ ಕಾಲ ಅಲ್ಲಿಯೇ ಇದ್ದು ಓಡಾಡಲು ಪರದಾಡುವಂತೆ ಮಾಡಿಬಿಡುತ್ತದೆ. ಜತೆಗೆ ಮಳೆ ಬಂದಾಗಲೆಲ್ಲ ಇಲ್ಲಿ ನೀರು ತುಂಬಿಕೊಂಡು ಮಿನಿ ಕೆರೆಯೇ ನಿರ್ಮಾಣವಾಗುತ್ತದೆ.

ಕೆರೆಯಾಗುವ ಬಸ್ ನಿಲ್ದಾಣ

ಕೆರೆಯಾಗುವ ಬಸ್ ನಿಲ್ದಾಣ

ಬಸ್ ನಿಲ್ದಾಣದಲ್ಲಿ ಈ ರೀತಿಯ ಸಮಸ್ಯೆ ಹಿಂದಿನಿಂದಲೂ ಇದೆ. ಆದರೆ ಮಳೆ ಆಗೊಮ್ಮೆ ಈಗೊಮ್ಮೆ ಬರುವುದರಿಂದ ಮಳೆ ಬಂದಾಗ ಬೊಬ್ಬೆ ಹೊಡೆಯುವ ಜನ ಬಳಿಕ ಮೌನಕ್ಕೆ ಜಾರುತ್ತಾರೆ. ಇದರಿಂದ ಸಂಬಂಧಿಸಿದವರು ಕೂಡ ಸೊಲ್ಲೆತ್ತದೆ ಸುಮ್ಮನಾಗಿ ಬಿಡುತ್ತಾರೆ. ಆದರೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಕಷ್ಟ ಮಾತ್ರ ಯಾರಿಗೂ ಅರ್ಥವಾಗುವುದಿಲ್ಲ.

ಮಳೆ ಬಂದರೆ ದುರ್ನಾಥ

ಮಳೆ ಬಂದರೆ ದುರ್ನಾಥ

ಮಳೆ ಬಂದಾಗ ನೀರು ತುಂಬುವುದಷ್ಟೇ ಅಲ್ಲ, ಆ ನಂತರ ತ್ಯಾಜ್ಯ ಸಹಿತ ಕೊಳೆತು ದುರ್ವಾಸನೆ ಬೀರುತ್ತದೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ಮೂಗು ಮುಚ್ಚಿಕೊಂಡು ಕೂಳಿತುಕೊಳ್ಳಬೇಕಾದ ಜನರ ಸಂಕಷ್ಟ ಹೇಳತೀರದು.

ಇಲ್ಲಿಂದಲೇ ಸೊಳ್ಳೆಗಳು ಉತ್ಪತ್ತಿಯಾಗಿ ಅವು ರೋಗ ಹರಡುತ್ತವೆ. ಮಳೆ ಬಂದರೆ ಬಸ್ ನಿಲ್ದಾಣದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ನೀರೆಲ್ಲ ಸಂಗ್ರಹಗೊಳ್ಳುವುದರಿಂದ ಬೈಕ್ ಮತ್ತು ಸೈಕಲ್ ಸ್ಟಾಂಡ್ ನೀರಿನಿಂದ ಆವೃತವಾಗಿಬಿಡುತ್ತದೆ. ಇನ್ನು ಈ ನೀರನ್ನು ಹೊರಕ್ಕೆ ತೆಗೆಯಲು ಯಾರೂ ಮುಂದೆ ಬಾರದ ಕಾರಣದಿಂದಾಗಿ ಅದು ಹಾಗೆಯೇ ಇಂಗಬೇಕಾಗುತ್ತದೆ. ಅಲ್ಲಿ ತನಕ ಅನಿವಾರ್ಯವಾಗಿ ಕಷ್ಟವನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಚರಂಡಿ ನಿರ್ವಹಣೆ ಇಲ್ಲ

ಚರಂಡಿ ನಿರ್ವಹಣೆ ಇಲ್ಲ

ಕೆಲವು ತಿಂಗಳ ಹಿಂದೆ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡ ಸಂದರ್ಭ ಮೀನು ಮಾರುಕಟ್ಟೆ ಬಳಿ ಮುಚ್ಚಿಕೊಂಡಿದ್ದ ಚರಂಡಿಯನ್ನು ಜೆಸಿಬಿ ಯಂತ್ರದ ಮೂಲಕ ದುರಸ್ತಿಪಡಿಸಿ ನೀರು ಹೊರ ಹೋಗಲು ಅವಕಾಶ ಮಾಡಿಕೊಡಲಾಗಿತ್ತು.

ಆದರೆ ಚರಂಡಿಯಲ್ಲಿ ಮತ್ತೆ ಹೂಳು ತುಂಬಿರುವ ಕಾರಣದಿಂದಾಗಿ ನೀರು ಹೋಗುತ್ತಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಮುಖ ಮಾಡಿ ಚರಂಡಿಯನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡಬೇಕಿದೆ.

ಜನ ಹಿಡಿಶಾಪ ಹಾಕೋದು ತಪ್ಪಲ್ಲ

ಜನ ಹಿಡಿಶಾಪ ಹಾಕೋದು ತಪ್ಪಲ್ಲ

ಇನ್ನು ಡಿಸಿಸಿ ಬ್ಯಾಂಕ್ ಬಳಿ ಇರುವ ಪುರಸಭಾ ನಿವೇಶನದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಕೂಡ ಮಳೆಯ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಕೆರೆಯಂತೆ ನೀರು ನಿಲ್ಲುತ್ತಿದೆ.

ಒಟ್ಟಾರೆ ಪಟ್ಟಣದಲ್ಲಿ ಮಳೆ ಬಂದರೆ ನೀರು ಹರಿದು ಹೋಗದೆ ಅಲ್ಲಿಯೇ ನಿಲ್ಲುವುದರಿಂದಾಗಿ ಹತ್ತು ಹಲವು ತೊಂದರೆಗಳಾಗುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಪರಿಹಾರ ಕಂಡುಹಿಡಿಯಬೇಕಿದೆ. ಇಲ್ಲದಿದ್ದರೆ ಮಳೆ ಬಂದಾಗ ಜನ ಹಿಡಿ ಶಾಪ ಹಾಕುವುದು ತಪ್ಪುವುದಿಲ್ಲ.

English summary
People are scared of rainfall in K R Pet because of inadequate drainage system in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X